ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕರಾವಳಿ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ಬಾರಿ ಸಂಪೂರ್ಣ ಹೊಸ ಅನುಭವ ನೀಡುವ ಉದ್ದೇಶದಿಂದ ಟಾಗೋರ ಕಡಲತೀರದಲ್ಲಿ ಹೆಲಿ ಟೂರಿಸಂ ಸೇವೆ ಆರಂಭಿಸುವ ಮಹತ್ವದ ಪ್ರಸ್ತಾವನೆ ಮುಂದಿಟ್ಟಲಾಗಿದೆ.
ಸಮುದ್ರದ ಮೇಲಿಂದಲೇ ಕರಾವಳಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಈ ಹೆಲಿಕಾಪ್ಟರ್ ಪ್ರವಾಸವು ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿ ರೂಪುಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ ನಗರದ ಹಳೆ ಫಿಶ್ ಮಾರ್ಕೆಟ್ ಸಮೀಪ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ತಾಂತ್ರಿಕ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಖಾಸಗಿ ಕಂಪನಿಯೊಂದರಿಂದ ಜಿಲ್ಲಾಡಳಿತಕ್ಕೆ ಹೆಲಿ ಟೂರಿಸಂ ಸೇವೆ ಕುರಿತಂತೆ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದೀಗ ಜಿಲ್ಲಾಡಳಿತದಿಂದ ಅಂತಿಮ ಅನುಮತಿ ಮಾತ್ರ ಬಾಕಿ ಉಳಿದಿದೆ.
ಪ್ರಸ್ತಾವನೆಯಂತೆ, ಸಾರ್ವಜನಿಕರಿಗೆ 6ರಿಂದ 7 ನಿಮಿಷಗಳವರೆಗೆ ಹೆಲಿಕಾಪ್ಟರ್ ವಿಹಾರ ಲಭ್ಯವಾಗಲಿದೆ. ಈ ಸೇವೆಗೆ ಕಂಪನಿಯು ಪ್ರತಿ ವ್ಯಕ್ತಿಗೆ ₹4,200 ಶುಲ್ಕ ನಿಗದಿಪಡಿಸಿರುವುದಾಗಿ ತಿಳಿದುಬಂದಿದೆ. ಜಿಲ್ಲಾಧಿಕಾರಿಗಳಿಂದ ಅಂತಿಮ ಅನುಮತಿ ದೊರೆತ ಬಳಿಕವೇ ಈ ಸೇವೆಯನ್ನು ಸಾರ್ವಜನಿಕರಿಗೆ ಅಧಿಕೃತವಾಗಿ ಆರಂಭಿಸಲಾಗುವುದು.
ಹೆಲಿ ಟೂರಿಸಂ ಮೂಲಕ ಪ್ರವಾಸಿಗರು ಟಾಗೋರ ಕಡಲತೀರ, ಅರಬ್ಬೀ ಸಮುದ್ರದ ವಿಸ್ತಾರ ದೃಶ್ಯ, ಕಾರವಾರ ನಗರದ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಕರಾವಳಿಯ ವಿಹಂಗಮ ನೋಟವನ್ನು ಆಕಾಶದಿಂದಲೇ ಅನುಭವಿಸಬಹುದಾಗಿದೆ. ಇದರಿಂದ ಕರಾವಳಿ ಉತ್ಸವಕ್ಕೆ ಬಂದವರಿಗೆ ವಿಭಿನ್ನ ಮತ್ತು ಸ್ಮರಣೀಯ ಅನುಭವ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಲ್ಲ ಮೂಲಗಳ ಪ್ರಕಾರ, ಈ ಹೆಲಿ ಟೂರಿಸಂ ಸೇವೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯುವ ಯೋಜನೆಯಾಗಿ ರೂಪುಗೊಳ್ಳಲಿದೆ. ಪರಂಪರೆ, ಸಂಸ್ಕೃತಿ ಮತ್ತು ಪ್ರಕೃತಿ ಸೌಂದರ್ಯದ ಜೊತೆಗೆ ಈಗ ಆಧುನಿಕ ಪ್ರವಾಸಿ ಅನುಭವವನ್ನು ಸೇರಿಸುವ ಮೂಲಕ ಕರಾವಳಿ ಉತ್ಸವದ ಆಕರ್ಷಣೆಗೆ ಮತ್ತೊಂದು ಹೊಸ ಆಯಾಮ ಸೇರ್ಪಡೆಯಾಗಲಿದೆ.
ಅಂತಿಮ ಅನುಮತಿಯ ನಿರೀಕ್ಷೆಯಲ್ಲಿರುವ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬಂದರೆ, ಕರಾವಳಿ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ.

