ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕರಾವಳಿ ಉತ್ಸವ–2025ರ ಅಂಗವಾಗಿ ನಗರ ಸೌಂದರ್ಯ ವೃದ್ಧಿ ಹಾಗೂ ಸಾರ್ವಜನಿಕರಲ್ಲಿ ಕಲಾ ಸಂವೇದನೆ ಬೆಳೆಸುವ ಉದ್ದೇಶದಿಂದ ಡಿಸೆಂಬರ್ 20 ರಂದು ಕಾರವಾರ ನಗರದಲ್ಲಿ ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಗೆ ಕಲಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ಪರ್ಧೆಯಲ್ಲಿ ಒಟ್ಟು 97 ಸ್ಪರ್ಧಾಳುಗಳು ಭಾಗವಹಿಸಿದ್ದು, ಅವರಲ್ಲಿ 41 ಮಂದಿ ಸ್ಪರ್ಧಾಳುಗಳು ನಿಗದಿತ ಅವಧಿಯಲ್ಲಿ ಗೋಡೆಗಳ ಮೇಲೆ ಚಿತ್ರಕಲೆಯನ್ನು ಪೂರ್ಣಗೊಳಿಸಿದರು.

ಕರಾವಳಿ ಜೀವನ ಶೈಲಿ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ವೈಭವ, ಸಮುದ್ರ ಹಾಗೂ ಜನಜೀವನವನ್ನು ಕೇಂದ್ರವಾಗಿಟ್ಟುಕೊಂಡು ಬಿಡಿಸಿದ ಚಿತ್ರಗಳು ಸಾರ್ವಜನಿಕರ ಗಮನ ಸೆಳೆದವು. ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳ ಗೋಡೆಗಳು ವಿವಿಧ ಬಣ್ಣಗಳ ಚಿತ್ರಗಳಿಂದ ಆಕರ್ಷಕವಾಗಿ ಕಾಣಿಸಿಕೊಂಡವು.

ತಜ್ಞರ ಸಮಿತಿಯು ಕಲಾತ್ಮಕತೆ, ವಿಷಯದ ಸ್ಪಷ್ಟತೆ, ಸಂದೇಶ, ಬಣ್ಣಗಳ ಬಳಕೆ ಹಾಗೂ ಆಕರ್ಷಣೆಯ ಆಧಾರದಲ್ಲಿ ಚಿತ್ರಗಳನ್ನು ಮೌಲ್ಯಮಾಪನ ಮಾಡಿತು. ಸ್ಪರ್ಧೆಯ ಫಲಿತಾಂಶದಂತೆ ವಿಷ್ಣು ಎಂ. ಗೌಡಾ ಪ್ರಥಮ ಸ್ಥಾನ, ಮಂಗೇಶ ಆಗೇರ ದ್ವಿತೀಯ ಸ್ಥಾನ ಹಾಗೂ ನವೀನ ದಿವಾಕರ ಶೆಡಗೇರಿ ತೃತೀಯ ಸ್ಥಾನ ಪಡೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕರಾವಳಿ ಉತ್ಸವ–2025ರ ಗೋಡೆಗಳ ಚಿತ್ರೀಕರಣ ಸಮಿತಿಯ ಅಧ್ಯಕ್ಷರು ಹಾಗೂ ಯೋಜನಾ ನಿರ್ದೇಶಕರು, ಡಿಯುಡಿಸಿ ಉತ್ತರ ಕನ್ನಡ ಕಾರವಾರ ಅವರು, “ಗೋಡೆ ಚಿತ್ರಕಲಾ ಸ್ಪರ್ಧೆಯ ಮೂಲಕ ನಗರಕ್ಕೆ ಶಾಶ್ವತ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಯುವ ಕಲಾವಿದರ ಪ್ರತಿಭೆಗೆ ವೇದಿಕೆ ಒದಗಿಸುವ ಜೊತೆಗೆ ಕರಾವಳಿ ಸಂಸ್ಕೃತಿಯನ್ನು ಸಾರ್ವಜನಿಕರ ಮುಂದೆ ತರಲಾಗಿದೆ.

ಮುಂದಿನ ದಿನಗಳಲ್ಲಿ ಇಂತಹ ಕಲಾ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಸ್ಪರ್ಧೆಯ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಜಿಲ್ಲಾಡಳಿತ ಅಭಿನಂದಿಸಿದ್ದು, ವಿಜೇತರಿಗೆ ಕರಾವಳಿ ಉತ್ಸವದ ಸಮಾರಂಭದಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

 

 

Please Share: