ಕರಾವಳಿ ವಾಯ್ಸ್ ನ್ಯೂಸ್

ಬೆಂಗಳೂರು: ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ, ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಲ್ಲಿ ಯಾವ ದಿನ ಮತ್ತು ಯಾವ ಸಮಯಕ್ಕೆ ತಪಾಸಣೆ ನಡೆಸಬೇಕು ಎಂಬುದನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸೈಲ್ ಪರಸ್ಪರ ಚರ್ಚಿಸಿ ನಿರ್ಧರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ವೈದ್ಯಕೀಯ ಜಾಮೀನು ಕೋರಿ ಸತೀಶ್ ಸೈಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ನಡೆಸಿತು. ಈ ವೇಳೆ ಇಡಿ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್, ಏಮ್ಸ್ ಮೇಲ್ವಿಚಾರಕರು ಬೆಂಗಳೂರಿನ ಇಡಿ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಜಠರ–ಕರುಳಿನ ತಜ್ಞರು ಡಿಸೆಂಬರ್ 19ರಂದು ಮಧ್ಯಾಹ್ನ 12.30ಕ್ಕೆ ಅಥವಾ ಡಿಸೆಂಬರ್ 20ರಂದು ಬೆಳಗ್ಗೆ 8.30ಕ್ಕೆ ಸೈಲ್ ಅವರನ್ನು ಏಮ್ಸ್ ನಿಯಂತ್ರಣ ಕೊಠಡಿಗೆ ಕರೆತರಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೈಲ್ ಪರ ವಕೀಲರು, ದಿಲ್ಲಿಯಲ್ಲಿ ವಾಯು ಗುಣಮಟ್ಟ ಹದಗೆಟ್ಟಿರುವುದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ ವೈದ್ಯಕೀಯ ತಪಾಸಣೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆದರೆ ನ್ಯಾಯಪೀಠ, ಇದು ನ್ಯಾಯಾಲಯದ ವಿಚಾರವಲ್ಲ. ವೈದ್ಯರ ಅನುಕೂಲತೆ ಗಮನದಲ್ಲಿಟ್ಟು ಇಡಿ ಮತ್ತು ಸೈಲ್ ಒಟ್ಟಾಗಿ ಚರ್ಚಿಸಿ ತೀರ್ಮಾನಿಸಬಹುದು ಎಂದು ಹೇಳಿತು.

ಇಡಿ ಸಲ್ಲಿಸಿರುವ ಮೆಮೋ ದಾಖಲಿಸಿಕೊಂಡ ನ್ಯಾಯಾಲಯ, ಏಮ್ಸ್‌ಗೆ ಹೋಗುವ ದಿನಾಂಕ ಮತ್ತು ಸಮಯ ನಿರ್ಧಾರಕ್ಕಾಗಿ ಅರ್ಜಿ ವಿಚಾರಣೆಯನ್ನು ಮುಂದೂಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿ, ಈ ಕುರಿತು ಇಡಿ ಅಧಿಕಾರಿಗಳ ಜತೆ ಚರ್ಚಿಸಿ ಸೈಲ್ ತೀರ್ಮಾನಿಸಬಹುದು ಎಂದು ನಿರ್ದೇಶಿಸಿತು. ಜೊತೆಗೆ ಮಧ್ಯಂತರ ಜಾಮೀನು ನೀಡಿರುವ ಆದೇಶವನ್ನು ವಿಸ್ತರಿಸಿ, ಅರ್ಜಿ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.

 

 

Please Share: