ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕುಮಟಾ ತಾಲೂಕಿನ ಮಾಸೂರು–ಲುಕ್ಕೇರಿ ಗ್ರಾಮದಲ್ಲಿ ಅಂಬಿಗ ಸಮುದಾಯದವರೇ ನಮ್ಮ ಮೇಲೆ ಜಾತಿ ಬಹಿಷ್ಕಾರ ಹೇರಿದ್ದಾರೆ ಎಂದು ಕೇಶವ ಅಂಬಿಗಾ ಆರೋಪಿಸಿದ್ದಾರೆ.
ಈ ಸಂಬಂಧ ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನೆ ಮುಂದಿನ ಶೌಚಾಲಯದ ಪೈಪ್ ಕುರಿತು ಪಂಚಾಯತ್ಗೆ ದೂರು ನೀಡಿದ್ದಕ್ಕೆ ಕೋಪಗೊಂಡ ಗ್ರಾಮಸ್ಥರು ನಮ್ಮ ಕುಟುಂಬವನ್ನು ಜಾತಿಯಿಂದ ಬಹಿಷ್ಕರಿಸಿದ್ದಾರೆ ಎಂದು ದೂರಿದರು.
ಗ್ರಾಮದ ಗಂಗಾಧರ ಸುಬ್ರಾಯ, ವೆಂಕಟ ಪರಮೇಶ್ವರ, ಉದಯ ಗೋವಿಂದ, ವಾಮನ ಪರಮೇಶ್ವರ, ಸುರೇಶ್ ಪರಮೇಶ್ವರ ಹಾಗೂ ಗೋಪಾಲಕೃಷ್ಣ ಎಂಬವರು ಸೇರಿ ಬಹಿಷ್ಕಾರ ಹೇರಿದ್ದಾರೆ. ಗ್ರಾಮದಲ್ಲಿ 77 ಅಂಬಿಗ ಸಮುದಾಯದ ಮನೆಗಳಿದ್ದು, ಎಲ್ಲ ಮನೆಗಳಿಗೆ ಕಾಯಿ ಹೋಳು ಹಂಚಿದರೆ ಮಾತ್ರ ಬಹಿಷ್ಕಾರ ತೆರವುಗೊಳಿಸಲಾಗುವುದು ಎಂದು ಷರತ್ತು ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಗ್ರಾಮದಲ್ಲಿ ತಪ್ಪು ಮಾಡಿದ್ದೀರಿ ಎಂದು 50 ಸಾವಿರ ರೂ. ದಂಡ ಕಟ್ಟುವಂತೆ ಒತ್ತಾಯಿಸಲಾಗಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ‘ಕಾಯಿ ಹೋಳು ಹಂಚಿ ಸಮಸ್ಯೆ ಸರಿಪಡಿಸಿಕೊಳ್ಳಿ’ ಎಂದು ಹೇಳಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾತಿ ಬಹಿಷ್ಕಾರದ ಕಾರಣ ಗ್ರಾಮದಲ್ಲಿ ನಮ್ಮೊಂದಿಗೆ ಯಾರೂ ಸಂಬಂಧ ಬೆಳೆಸುತ್ತಿಲ್ಲ. ಮದುವೆ ಸಂಬಂಧಕ್ಕೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಸಮುದಾಯದ ಯಾರ ಮನೆಗೂ ನಮಗೆ ಪ್ರವೇಶವಿಲ್ಲ, ನಮ್ಮ ಮನೆಗೂ ಯಾರೂ ಬರುತ್ತಿಲ್ಲ. ಈ ಬಹಿಷ್ಕಾರದಿಂದ ನಮಗೆ ಮುಕ್ತಿ ಬೇಕು, ನ್ಯಾಯ ಒದಗಿಸಬೇಕು ಎಂದು ಕೇಶವ ಅಂಬಿಗಾ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಣಪತಿ ಅಂಬಿಗಾ ಹಾಗೂ ಸುಬ್ಬಿ ಅಂಬಿಗಾ ಉಪಸ್ಥಿತರಿದ್ದರು.

