ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಗೋವಾದ ತಲ್ಪೋಣಾ ಕರಾವಳಿ ಕಾವಲು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವ ಮೀನುಗಾರಿಕೆ ಬೋಟೊಂದು ಕಾಣೆಯಾದ ಪ್ರಕರಣದಲ್ಲಿ ಕರಾವಳಿ ಕಾವಲು ಪೊಲೀಸರು ಹಾಗೂ ಕೋಸ್ಟ್ ಗಾರ್ಡ್ ಸಮನ್ವಯದೊಂದಿಗೆ ನಡೆಸಿದ ಹೆಲಿಕಾಪ್ಟರ್ ಶೋಧ ಕಾರ್ಯಾಚರಣೆಯಲ್ಲಿ ದೋಣಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ.

ಗೋವಾ ರಾಜ್ಯದ ತಲ್ಪೋಣಾ ವ್ಯಾಪ್ತಿಯ ‘ವೇತಾಳ್’ ಹೆಸರಿನ ಮೀನುಗಾರಿಕೆ ದೋಣಿಯಲ್ಲಿ ನಾಲ್ವರು ಮೀನುಗಾರರು ಸೋಮವಾರ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸುತ್ತಾ ಕರ್ನಾಟಕದ ಸಮುದ್ರ ವ್ಯಾಪ್ತಿಗೆ ಪ್ರವೇಶಿಸಿದ ಸಂದರ್ಭದಲ್ಲಿ ದೋಣಿಯ ಎಂಜಿನ್ ತಾಂತ್ರಿಕ ದೋಷದಿಂದ ಬಂದ್ ಆಗಿದೆ. ಈ ವೇಳೆ ಬಲವಾದ ಸಮುದ್ರದ ಅಲೆಗಳು ಮತ್ತು ಗಾಳಿಯ ಪ್ರಭಾವದಿಂದ ದೋಣಿ ನಿಯಂತ್ರಣ ತಪ್ಪಿ ಆಳಸಮುದ್ರದತ್ತ ತೇಲಿಹೋಗಿದ್ದು, ಮೀನುಗಾರರೊಂದಿಗೆ ಯಾವುದೇ ಸಂಪರ್ಕ ಸಾಧಿಸಲು ಸಾಧ್ಯವಾಗದೆ ದೋಣಿ ಕಾಣೆಯಾಗಿದೆ.

ಸೋಮವಾರ ಸಂಜೆಯಾದರೂ ದೋಣಿ ವಾಪಸ್ ಆಗದೆ ಇದ್ದ ಕಾರಣ ಆತಂಕಗೊಂಡ ಕುಟುಂಬಸ್ಥರ ಮಾಹಿತಿ ಮೇರೆಗೆ ಮಂಗಳವಾರ ಬೆಳಗ್ಗೆ ತಲ್ಪೋಣಾ ಕರಾವಳಿ ಕಾವಲು ಪೊಲೀಸ್ ಠಾಣೆಯ ಅಧಿಕಾರಿಗಳು ವ್ಯಾಪಕ ಹುಡುಕಾಟ ಕಾರ್ಯಾಚರಣೆ ಆರಂಭಿಸಿದರು. ಪ್ರಕರಣದ ಗಂಭೀರತೆಯನ್ನು ಗಮನಿಸಿ ಕಾರವಾರ ಮತ್ತು ಅಂಕೋಲಾ ಕರಾವಳಿ ಕಾವಲು ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಸಮುದ್ರದಲ್ಲಿ ಕಾಣೆಯಾದ ದೋಣಿ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು.

ಇದೇ ವೇಳೆ ಕೋಸ್ಟ್ ಗಾರ್ಡ್ ಸಹಕಾರದೊಂದಿಗೆ ಗೋವಾ ಕರಾವಳಿ ಕಾವಲು ಪೊಲೀಸರು ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯಾಚರಣೆ ನಡೆಸಿದರು. ಮಂಗಳವಾರ ಸಂಜೆ ಅಂಕೋಲಾ ತಾಲೂಕಿನ ಬೆಳಂಬಾರ ಕಡಲತೀರದ ಸಮೀಪದಿಂದ ಆಳಸಮುದ್ರದವರೆಗೆ ವಿಸ್ತೃತವಾಗಿ ಪರಿಶೀಲನೆ ನಡೆಸಿದ ತಂಡ ಕೊನೆಗೂ ಸಮುದ್ರದ ಮಧ್ಯಭಾಗದಲ್ಲಿ ‘ವೇತಾಳ್’ ದೋಣಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು.

ಪತ್ತೆಯಾದ ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಸುರಕ್ಷಿತರಾಗಿದ್ದು, ಅಗತ್ಯ ಸಹಾಯ ಒದಗಿಸಿದ ಬಳಿಕ ದೋಣಿಯನ್ನು ತಲ್ಪೋಣಾ ಬಂದರಿಗೆ ವಾಪಸ್ ಕರೆತರುವಲ್ಲಿ ಕರಾವಳಿ ಕಾವಲು ಪೊಲೀಸರು ಯಶಸ್ವಿಯಾಗಿದ್ದಾರೆ. ಸಕಾಲದಲ್ಲಿ ಕೈಗೊಂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

 

 

Please Share: