ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಇಲ್ಲಿನ ಕಡಲ ತೀರ ಪ್ರದೇಶಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯೊಂದರಲ್ಲಿ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿರುವ ಘಟನೆ ಮಂಗಳವಾರ ನಗರದಲ್ಲಿ ಕುತೂಹಲ ಮೂಡಿಸಿದೆ.
ಬೆಳಗ್ಗೆ ಇಲ್ಲಿನ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಕೂತಿದ್ದ ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಅಳವಡಿಸಿದ್ದ ಜಿಪಿಎಸ್ ಟ್ರ್ಯಾಕರ್ ಸ್ಥಳೀಯರ ಗಮನ ಸೆಳೆದಿದೆ. ಸಾಮಾನ್ಯ ಹಕ್ಕಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡ ಹಕ್ಕಿಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಮರೈನ್ ಅರಣ್ಯ ವಿಭಾಗದ ಅಧಿಕಾರಿಗಳು ಹಕ್ಕಿಯನ್ನು ಸುರಕ್ಷಿತವಾಗಿ ಹಿಡಿದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಹಕ್ಕಿಯ ಬೆನ್ನಿನ ಭಾಗಕ್ಕೆ ಅಳವಡಿಸಲಾಗಿದ್ದ ಜಿಪಿಎಸ್ ಟ್ರ್ಯಾಕರ್‌ನಲ್ಲಿ ‘ಚೈನೀಸ್ ವಿಜ್ಞಾನ ಅಕಾಡೆಮಿ – ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್’ ಎಂಬ ವಿಳಾಸ ಹಾಗೂ ವಿವರಗಳು ಇರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇದರಿಂದಾಗಿ ಹಕ್ಕಿಯು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಯೋಜನೆಯ ಭಾಗವಾಗಿರುವ ಸಾಧ್ಯತೆ ಇದೆ ಎಂಬುದು ತಿಳಿದು ಬಂದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಸೀಗಲ್ ಹಕ್ಕಿಗಳ ಚಲನ–ವಲನ, ಆಹಾರ ಪದ್ಧತಿ ಹಾಗೂ ವಲಸೆ ಮಾರ್ಗಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾಗುತ್ತದೆ. ಇಂತಹ ಟ್ರ್ಯಾಕರ್‌ಗಳ ಮೂಲಕ ಹಕ್ಕಿಗಳು ಯಾವ ದೇಶಗಳಿಂದ ಯಾವ ಮಾರ್ಗದಲ್ಲಿ ಸಂಚರಿಸುತ್ತವೆ, ಯಾವ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತವೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಕಾರವಾರದ ಕಡಲ ತೀರಕ್ಕೆ ಬಂದಿರುವ ಈ ಸೀಗಲ್ ಕೂಡ ಇದೇ ರೀತಿಯ ಸಂಶೋಧನಾ ಕಾರ್ಯದ ಭಾಗವಾಗಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಅರಣ್ಯ ಇಲಾಖೆ ಚೈನೀಸ್ ವಿಜ್ಞಾನ ಅಕಾಡೆಮಿಯ ಸಂಬಂಧಿತ ಸಂಶೋಧನಾ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. ಅಗತ್ಯ ಮಾಹಿತಿ ಹಾಗೂ ಮಾರ್ಗಸೂಚಿ ದೊರಕಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ನಡುವೆ ಹಕ್ಕಿಯನ್ನು ಯಾವುದೇ ಹಾನಿಯಾಗದಂತೆ ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.
ವಿದೇಶಿ ಸಂಶೋಧನಾ ಸಂಸ್ಥೆಗಳಿಂದ ಗುರುತಿಸಲ್ಪಟ್ಟ ವಲಸೆ ಹಕ್ಕಿ ಕಾರವಾರದಲ್ಲಿ ಪತ್ತೆಯಾಗಿರುವುದು ಪರಿಸರ ಪ್ರಿಯರು ಹಾಗೂ ಸ್ಥಳೀಯರಲ್ಲಿ ವಿಶೇಷ ಕುತೂಹಲ ಮೂಡಿಸಿದ್ದು, ಕರಾವಳಿ ಪ್ರದೇಶದ ಜೀವ ವೈವಿಧ್ಯತೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

