ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತಾಲೂಕಿನ ಅಲಿಗದ್ದಾ ಗಾವಾಡವಾಡದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಹಂಚಿನ ಮನೆವೊಂದು ಭಸ್ಮವಾಗಿರುವ ಘಟನೆ ನಡೆದಿದೆ.

Banner Ad

ಭೀಮ ಗೌಡ ಅವರಿಗೆ ಸೇರಿದ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ಎಲ್ಲ ವಸ್ತುಗಳು ಸಂಪೂರ್ಣ ಸುಟ್ಟು ಕರಕಾಗಿವೆ. ಆದರೆ, ಜೀವಹಾನಿ ಸಂಭವಿಸದೇ ಉಳಿದಿರುವುದು ಮಾತ್ರ ಸಾಂತ್ವಾನದ ವಿಷಯ.

ಬೆಳಿಗ್ಗೆ ಮನೆಗೆ ಬೀಗ ಹಾಕಿ ಕುಟುಂಬದವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಆರಂಭಿಕ ಹಂತದಲ್ಲಿ ಯಾರಿಗೂ ತಿಳಿದುಬರಲಿಲ್ಲ. ನಂತರ ಸ್ಥಳೀಯರು ಜ್ವಾಲೆಗಳು ಎದ್ದಿರುವುದು ಗಮನಿಸಿ ಬೀಗ ಒಡೆದು ಬೆಂಕಿ ನಂದಿಸಲು ಯತ್ನಿಸಿದರೂ, ಬೆಂಕಿ ಕಿಡಿ ವೇಗವಾಗಿ ವ್ಯಾಪಿಸಿದ ಕಾರಣ ನಿಯಂತ್ರಣ ಸಾಧ್ಯವಾಗಲಿಲ್ಲ. ಹತ್ತಿರದ ಕಂಪನಿಯಿಂದ ಪೈಪ್‌ ಮೂಲಕ ನೀರು ಸುರಿದು ಸ್ಥಳೀಯರು ಶ್ರಮಿಸಿದರೂ ಮನೆ ರಕ್ಷಣೆ ಸಾಧ್ಯವಾಗಲಿಲ್ಲ.

ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಬೆಂಕಿ ನಂದಿಸಿದರೂ, ಆಗಲೇ ಮನೆ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಮನೆಯಲ್ಲಿದ್ದ ಅಡುಗೆಪಾತ್ರೆಗಳು, ಇಲೆಕ್ಟ್ರಾನಿಕ್ ವಸ್ತುಗಳು, ಚಿನ್ನಾಭರಣಗಳು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಪ್ರಾಥಮಿಕ ಅಂದಾಜು ತಿಳಿಸಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದ್ದು, ಘಟನೆಯ ನಿಖರ ಕಾರಣ ತಿಳಿದುಬರುವ ಕಾರ್ಯ ಮುಂದುವರಿದಿದೆ.

 

 

Please Share: