ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ತಾಲೂಕಿನ ಹನಮಾಪುರ ಗ್ರಾಮದಲ್ಲಿ ನಡುರಾತ್ರಿ ನಡೆದ ಬೆಂಕಿ ದುರಂತವು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಏಕಾಂಗಿಯಾಗಿ ವಾಸಿಸುತ್ತಿದ್ದ 70 ವರ್ಷದ ಪಕೀರವ್ವ ರಾಮಣ್ಣ ಆಲೂರು ಅವರ ಮನೆ ಬೆಂಕಿಗೆ ಆಹುತಿಯಾದ ಘಟನೆ ಗಂಭೀರ ಶಂಕೆಗಳಿಗೆ ಕಾರಣವಾಗಿದೆ.
ನಿನ್ನೆ ರಾತ್ರಿ ಹೇಗೆ ಬೆಂಕಿ ತಗುಲಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಕೆಲವೇ ನಿಮಿಷಗಳಲ್ಲಿ ಮನೆ ಅಟ್ಟಹಾಸಿ ಕಿಚ್ಚಿನಲ್ಲಿ ಕರಕಲಾಗಿದ್ದು, ವೃದ್ದೆ ಪಕೀರವ್ವ ಅವರಿಗೂ ಭಾರೀ ಸುಟ್ಟ ಗಾಯಗಳಾಗಿವೆ. ತಕ್ಷಣ 108 ಅಂಬುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಜೀವ ಕಳೆದುಕೊಂಡರು.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರೂ ಮನೆ ಸಂಪೂರ್ಣ ಬೂದಿಯಾಗಿರುವ ದುರ್ಘಟನೆ ಸ್ಥಳಕ್ಕೆ ಭೇಟಿ ನೀಡಿದವರಿಗೆ ಕಳವಳ ಮೂಡಿಸಿದೆ.
ಈ ಘಟನೆ ಸಹಜವೇ? ಅಕಸ್ಮಾತ್ ಬೆಂಕಿಯೇ? ಅಥವಾ ಬೇರೆ ಯಾವುದೋ ಕಾರಣ? ಗ್ರಾಮದೊಳಗೆ ಈಗ ಹಲವು ಊಹಾಪೋಹಗಳು ಗಿರಕಿ ಹೊಡೆಯುತ್ತಿವೆ. ತನಿಖೆಯಿಂದಲೇ ನಿಜ ಬಹಿರಂಗವಾಗುವ ನಿರೀಕ್ಷೆ.
