ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಶೇ.40 ರ ಭರ್ಜರಿ ರಿಯಾಯಿತಿ! ಕಡಿಮೆ ದರದಲ್ಲಿ ಫ್ರಿಡ್ಜ್, ವಾಷಿಂಗ್ ಮಷಿನ್, ಸೊಫಾ, ಟಿವಿ—ಎಲ್ಲವೂ ಲಭ್ಯ! ಎಂಬ ಬಣ್ಣದ ಜಾಹೀರಾತುಗಳು, “ಗ್ಲೋಬಲ್ ಎಂಟರ್‌ಪ್ರೈಸಸ್” ಎನ್ನುವ ಹೆಸರಿನಲ್ಲಿ ತೆರೆದ ಮಳಿಗೆ… ಜನರು ನಂಬಿ ಮುಂಗಡ ಹಣ ಪಾವತಿಸಿದರು. ಆದರೆ ಕೆಲವೇ ದಿನಗಳಲ್ಲಿ ಅಂಗಡಿಯ ಬಾಗಿಲಿಗೆ ಬೀಗ ಬಿದ್ದಿತು—ವಂಚನೆ ಬಯಲಾಯಿತು!
ಪಟ್ಟಣದ ಕಾರ್ಟ್ ರಸ್ತೆಯ ಈ ಹೊಸ ಮಳಿಗೆ ಕಳೆದ ಎರಡು ತಿಂಗಳುಗಳಲ್ಲಿ ಸುಮಾರು 300 ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ರಾತ್ರೋರಾತ್ರಿ ಪರಾರಿಯಾದ ‘ಗ್ಲೋಬಲ್’ ಗ್ಯಾಂಗ್‌ನ ಮೂರು ಸೂತ್ರಧಾರರನ್ನು ಭಟ್ಕಳ ಪೊಲೀಸರು ಪತ್ತೆಹಚ್ಚಿದ್ದಾರೆ.
ಬಂಧಿತರು ಕೇರಳ ಮತ್ತು ತಮಿಳುನಾಡಿನ ಎಂ. ಗಣೇಶನ್, ತ್ಯಾಗರಾಜನ್ ಮತ್ತು ಮೈಯನಾದನ್ ಎಂಬವರು. ಜನರನ್ನು ನಂಬಿಸಲು ಸ್ಥಳೀಯ ಬ್ಯಾಂಕ್ ಖಾತೆ ತೆರೆಯುವುದು, ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳುವುದು, ಸ್ಥಳೀಯ ಯುವಕರನ್ನೇ ಕೆಲಸಕ್ಕೆ ನೇಮಿಸುವುದು—ಎಲ್ಲವೂ ಅವರ “ವಂಚನೆ ಪ್ಲಾನ್” ಭಾಗವೇ ಆಗಿತ್ತು.
ಆರಂಭದಲ್ಲಿ ಕೆಲವರಿಗೆ ಕಡಿಮೆ ಬೆಲೆಗೆ ವಸ್ತು ಪೂರೈಕೆ ಮಾಡಿ ವಿಶ್ವಾಸ ಗಳಿಸಿದ ಅವರು, ನಂತರ ನೂರಾರು ಜನರಿಂದ ಮುಂಗಡ ಹಣ ಪಡೆದು ಒಂದು ರಾತ್ರಿ ಅಂಗಡಿಗೆ ಬೀಗ ಹಾಕಿ ನಾಪತ್ತೆಯಾಗಿದ್ದರು.
ವಂಚನೆ ಬಯಲಾಗುತ್ತಿದ್ದಂತೆ ಸಂತ್ರಸ್ತರು ಮಳಿಗೆಯ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೊಹಮ್ಮದ್ ಸವೂದ್ ಅವರ ದೂರು ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಹೇಶ್ ಎಂ.ಕೆ ಮತ್ತು ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್ ನೇತೃತ್ವದ ತಂಡವು ಸೂತ್ರಧಾರರನ್ನು ಪತ್ತೆಹಚ್ಚಿ ಬಂಧಿಸಿದೆ.
ಪಿಎಸ್‌ಐ ನವೀನ ಎಸ್. ನಾಯ್ಕ ಮತ್ತು ತಿಮ್ಮಪ್ಪ ಎಸ್. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿನಾಯಕ ಪಾಟೀಲ್, ದೀಪಕ ನಾಯ್ಕ, ದಿನೇಶ್ ನಾಯ್ಕ, ದೇವು ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ರೇವಣಸಿದ್ದಪ್ಪ ಮಾಗಿ, ಕಿರಣ ಪಾಟೀಲ್ ಮತ್ತು ಸಚೀನ ಪವಾರ ಭಾಗವಹಿಸಿದ್ದರು.
ಪೊಲೀಸರ ಈ ವೇಗದ ಕಾರ್ಯಾಚರಣೆ ಭಟ್ಕಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, “ಗ್ಲೋಬಲ್” ಗ್ಯಾಂಗ್‌ಗೆ ಈಗ ಜೈಲುಗೇಟು ತೆರೆದಂತಾಗಿದೆ!


