ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ, ನ.9: ಆಸ್ತಿ ಹಂಚಿಕೆಗೆ ತಂದೆ ಒಪ್ಪದ ಕಾರಣ, ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಕ್ರೂರ ಘಟನೆ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಡೆದಿದೆ.
ಮೃತರನ್ನು ನಾರಾಯಣ ಪರಶು ಮರಾಠಿ (51) ಎಂದು ಗುರುತಿಸಲಾಗಿದೆ. ಆರೋಪಿ ಮಗ ಹರೀಶ ಮರಾಠಿ (29) ಕೊಲೆಯಾದ ಬಳಿಕ ಕೊಡಲಿಸಹಿತ ಪರಾರಿಯಾಗಿದ್ದಾನೆ.
ಮಾಹಿತಿಯಂತೆ, ನಾರಾಯಣ ಮರಾಠಿ ಅವರು ಪುತ್ರ ಹರೀಶ ಮರಾಠಿ ಮತ್ತು ಪುತ್ರಿ ತಾರಾ ಮರಾಠಿ ಜೊತೆ ವಾಸಿಸುತ್ತಿದ್ದರು. ಹರೀಶ ಅವರು ತೋಟದ ಕೆಲಸ ಮಾಡುತ್ತಿದ್ದು, ಪತ್ನಿ ಸವಿತಾ ಹಾಗೂ ಮಗಳು ಸುರಕ್ಷಾ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದರು. ಸಹೋದರಿ ತಾರಾ ಮತ್ತು ಸವಿತಾ ನಡುವೆ ಗೃಹಕಲಹ ನಡೆಯುತ್ತಿದ್ದುದರಿಂದ ಕುಟುಂಬದಲ್ಲಿ ನಿರಂತರ ಗಲಾಟೆ ನಡೆಯುತ್ತಿತ್ತು.
ನವೆಂಬರ್ 8ರಂದು ನಡೆದ ಜಗಳದ ನಂತರ, ನವೆಂಬರ್ 9ರ ಮಧ್ಯಾಹ್ನ ಮತ್ತೆ ವಿವಾದ ಉಂಟಾಯಿತು. ಈ ವೇಳೆ ತಂದೆ ನಾರಾಯಣ ಮರಾಠಿ ಮನೆಗೆ ಬಂದಾಗ ಮಗಳು ತಾರಾ, ಅಣ್ಣ ಹರೀಶನಿಂದ ಹೊಡೆದ ವಿಚಾರವನ್ನು ಹೇಳಿದರು. ಇದರಿಂದ ಕೋಪಗೊಂಡ ತಂದೆ ಮಗನಿಗೆ ಬೈದು, “ನಿನ್ನ ವಿರುದ್ಧ ಪೊಲೀಸ್ ದೂರು ಕೊಡುತ್ತೇನೆ” ಎಂದು ಎಚ್ಚರಿಸಿದರು.
ಇದರಿಂದ ಆಕ್ರೋಶಗೊಂಡ ಹರೀಶ ಮರಾಠಿ ಅವರು ಕೊಡಲಿಯನ್ನು ಎತ್ತಿ ತಂದೆ ನಾರಾಯಣ ಮರಾಠಿ ಅವರ ತಲೆಗೆ ಬಾರಿಸಿದರು. “ಮನೆ ಸಾಲ, ಮದುವೆ ಸಾಲ ನಾನೇ ತೀರಿಸಿದೆ, ಆದರೂ ಆಸ್ತಿ ಕೊಡಲಿಲ್ಲ” ಎಂದು ಅಬ್ಬರಿಸುತ್ತಾ ಮತ್ತೊಮ್ಮೆ ಕೊಡಲಿಯನ್ನು ಬೀಸಿದರು. ಎಡ ಕಿವಿ ಭಾಗಕ್ಕೆ ತಾಗಿದ ಪರಿಣಾಮ ನಾರಾಯಣ ಮರಾಠಿ ಅವರು ಸ್ಥಳದಲ್ಲೇ ಕುಸಿದು ಬಿದ್ದರು.
ಈ ದೃಶ್ಯ ಕಂಡ ತಾರಾ ಮರಾಠಿ ಅವರು ತಕ್ಷಣ ತಂದೆಯನ್ನು ಯಲ್ಲಾಪುರ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಅವರನ್ನು ಮೃತ ಎಂದು ಘೋಷಿಸಿದರು.
ಘಟನೆಯ ಕುರಿತು ಪಿಎಸ್ಐ ರಾಜಶೇಖರ ವಂದಲಿ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಾಗಿದ್ದು, ಹರೀಶ ಮರಾಠಿ ಅವರ ಶೋಧ ಕಾರ್ಯಾಚರಣೆ ಪ್ರಾರಂಭವಾಗಿದೆ.


