ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಒಳ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ (CISF) ಹೆಡ್ ಕಾನ್ಸ್ಟೆಬಲ್ ಮೇಲೆ ಗೇಟ್ ಬಿದ್ದು ಅವರು ಮೃತಪಟ್ಟ ದಾರುಣ ಘಟನೆ ಶನಿವಾರ ರಾತ್ರಿ ನಡೆದಿದೆ.
ಮಹಾರಾಷ್ಟ್ರದ ಮಹಿಮಾನಗಡ್ ಮೂಲದ ಶೇಖರ ಭೀಮರಾವ್ ಜಗದಾಲೆ (48) ಮೃತಪಟ್ಟ ಸಿಐಎಸ್ಎಫ್ ಸಿಬ್ಬಂದಿ. ಅಣು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಕಾವಲಿನಲ್ಲಿ ನಿಂತಿದ್ದ ವೇಳೆ ಭಾರವಾದ ಗೇಟ್ ಆಕಸ್ಮಿಕವಾಗಿ ಕುಸಿದು ಬಿದ್ದು ತಲೆಗೆ ಬಲವಾದ ಏಟು ಬಿದ್ದಿದೆ.
ಶೇಖರ ಗಂಭೀರವಾಗಿ ಗಾಯಗೊಂಡಿದ್ದು, ಸಹೋದ್ಯೋಗಿಗಳು ತಕ್ಷಣ ಸ್ಥಳೀಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಮಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಗೇಟ್ ಕುಸಿತದ ನಿಖರ ಕಾರಣ ಪತ್ತೆಹಚ್ಚಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.


