ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ತಾಲೂಕಿನ ಕೊಡ್ಲಗದ್ದೆ ಗ್ರಾಮದ ರಾಮನಗುಳಿ ಮಜರೆ ಬಳಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಮೇಯುತ್ತಿದ್ದ 5 ತಿಂಗಳ ಗರ್ಭಿಣಿ ಆಕಳನ್ನು ಚಿರತೆಯೊಂದು ಬೇಟೆಯಾಡಿ ಕೊಂದು ಅರಣ್ಯ ಪ್ರದೇಶಕ್ಕೆ ಎಳೆದೊಯ್ದ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಉಂಟುಮಾಡಿದೆ.

ಮಂಜುನಾಥ ಗೌರೀಶ ನಾಯಕ ಎಂಬುವವರಿಗೆ ಸೇರಿದ ಆಕಳು ಕಳೆದ ನಾಲ್ಕು ದಿನಗಳ ಹಿಂದೆ ಚಿರತೆಯ ದಾಳಿಗೆ ಬಲಿಯಾದದ್ದು ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಚಿರತೆಯ ಸ್ಪಷ್ಟ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಟ್ರ್ಯಾಪಿಂಗ್ ಕ್ಯಾಮೆರಾದಲ್ಲೂ ಚಿರತೆಯ ಚಲನವಲನ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಹಜರತ್ ಅಲಿ ಕುಂದಗೋಳ ಹಾಗೂ ಅರಣ್ಯ ಗಸ್ತುಪಾಲಕ ಸೋಮನಾಥ ಕಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊಡ್ಲಗದ್ದೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಯ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಪಶುಹಾನಿ ಜೊತೆಗೆ ಮಾನವ ಜೀವಕ್ಕೂ ಅಪಾಯದ ಭೀತಿ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಚಿರತೆಯ ಚಟುವಟಿಕೆ ಹತ್ತಿಕ್ಕಲು ಹೆಚ್ಚುವರಿ ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಅಳವಡಿಸುವ ಜೊತೆಗೆ ಗಸ್ತು ಬಲಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.

 

Please Share: