ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗದಲ್ಲಿ, ಬಂದರು ಹತ್ತಿರ ಮೂರು ಬಾಂಬ್ ಪತ್ತೆ! ಬಾಂಬ್ ಇಟ್ಟ ಆಗುಂತಕರನ್ನು ಪೊಲೀಸರು ಬಂಧನೆಗೂ ಒಳಪಡಿಸಿದ್ದಾರೆ!

ಓಹ್, ಆದರೆ ಕ್ಷಣ — ಅಸಲಿ ಬಾಂಬ್ ಅಲ್ಲ ಅದು! ಹುಸಿ ಬಾಂಬ್! ಬಂಧಿಸಿರುವವರು ಕೂಡಾ ಆಗುಂತಕರಲ್ಲ — ಪೊಲೀಸರೇ!

ಹೌದು, ಇದು ನಿಜವಾದ ದಾಳಿ ಅಲ್ಲ, ಬಿಗಿ ಭದ್ರತಾ ಅಣುಕು ಕಾರ್ಯಾಚರಣೆ — ‘ಸಾಗರ ಕವಚ’! ಕರಾವಳಿ ಭದ್ರತೆಯನ್ನು ಪರೀಕ್ಷಿಸಲು ನೌಕಾಪಡೆ, ತಟರಕ್ಷಕ ಪಡೆ, ಕರಾವಳಿ ಕಾವಲು ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟಾಗಿ ಎರಡು ದಿನಗಳ ಅತಿದೊಡ್ಡ ಅಭ್ಯಾಸ ಆರಂಭಿಸಿದ್ದಾರೆ.

🔴 ರೆಡ್ ಫೋರ್ಸ್ ವಿರುದ್ಧ 🔵 ಬ್ಲೂ ಫೋರ್ಸ್ — ಬಾಂಬ್ ಶೋಧದ ರಣತಂತ್ರ! ಅಭ್ಯಾಸದಲ್ಲಿ ಪಡೆಗಳನ್ನು ಎರಡು ವಿಭಾಗಗಳಾಗಿ ಹಂಚಲಾಗಿದೆ:

ರೆಡ್ ಫೋರ್ಸ್ – ನೌಕಾ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇರಿಸಲಿದ್ದಾರೆ.

ಬ್ಲೂ ಫೋರ್ಸ್ – ಇವುಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವುದು ಪೊಲೀಸ್ ತಂಡದ ಜವಾಬ್ದಾರಿ.

ವಾಣಿಜ್ಯ ಬಂದರು, ಮೀನುಗಾರಿಕೆ ಬಂದರು, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಕಾಳಿ ಸೇತುವೆ, ಮಲ್ಲಾಪುರ, ಕದ್ರಾ ಮೊದಲಾದ ಸ್ಥಳಗಳಲ್ಲಿ ಹೆಚ್ಚುವರಿ ಪಡೆ ನಿಯೋಜಿಸಲಾಗಿದೆ.

ಮುಖ್ಯ ರಸ್ತೆಗಳಲ್ಲಿ ವಾಹನ ತಪಾಸಣೆ ಜೋರಾಗಿದೆ; ಕಾಳಿ ಸೇತುವೆ, ಬೈತಖೋಲ, ಅರಗಾ, ಮುದಗಾ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.

ಕರಾವಳಿಯುದ್ದಕ್ಕೂ ಬಿಗಿ ಬಂದೋಬಸ್ತ್!

ಬಸ್ ನಿಲ್ದಾಣಗಳು, ಹೆದ್ದಾರಿಗಳು, ರೈಲು ನಿಲ್ದಾಣಗಳವರೆಗೆ ಭದ್ರತಾ ಕವಚ ಬಿಗಿಗೊಳಿಸಲಾಗಿದೆ. ತಟರಕ್ಷಕ ಪಡೆ ಹಾಗೂ ಕರಾವಳಿ ಕಾವಲು ಪೊಲೀಸರು ಕಡಲಿನೊಳಗೆ ದಿನಪೂರ್ತಿ ಗಸ್ತು ತಿರುಗಲಿದ್ದಾರೆ.

ನಾಗರಿಕರಿಗೆ ವಿನಂತಿ:ಪರಿಶೀಲನೆ ಸಂದರ್ಭದಲ್ಲಿ ವಾಹನ ತಪಾಸಣೆ ಅಥವಾ ಭದ್ರತಾ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು.

ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳನ್ನು ಕಂಡರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

 

Please Share: