ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಮಾಜದ ಏಕತೆ, ಶಿಕ್ಷಣ ಹಾಗೂ ಸಂಸ್ಕಾರಗಳೇ ಸಮುದಾಯದ ಅಭಿವೃದ್ಧಿಗೆ ಭದ್ರ ಅಡಿಪಾಯವಾಗಿವೆ ಎಂದು ಆಧ್ಯಾ ಎಂಟರ್‌ಪ್ರೈಸಸ್ ಮಾಲಕ ಹಾಗೂ ಹೇಮಾದ್ರಿ ಮಿನರಲ್ಸ್ ಪ್ರೈ.ಲಿ. ನಿರ್ದೇಶಕ ಯುವ ಉದ್ಯಮಿ ಕುಮಾರ ಎಸ್. ನಾಯ್ಕ ಹೇಳಿದರು.
ಅವರು ರವಿವಾರ ತಾಲೂಕಿನ ಕಣಸಗಿರಿಯಲ್ಲಿ ಕ್ಷತ್ರೀಯ ಕೋಮಾರಪಂಥ ಸಮಾಜ (ರಿ), ಸದಾಶಿವಗಡ–ಕಣಸಗಿರಿ ವತಿಯಿಂದ ಆಯೋಜಿಸಲಾದ 13ನೇ ವಾರ್ಷಿಕ (2024–25) ಸರ್ವಸಾಮಾನ್ಯ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಗುಣಮಟ್ಟದ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಲಲಿತ ಎಂಟರ್‌ಪ್ರೈಸಸ್ ಮಾಲಕ ಹಾಗೂ ಸಮಾಜಸೇವಕ ಶುಭಂ ಜಿ. ಕಳಸ, ಸಮಾಜವು ಕೇವಲ ಹಬ್ಬ–ಹರಿದಿನಗಳಿಗೆ ಸೀಮಿತವಾಗದೆ, ಯುವಜನರ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಹೊಣೆಗಾರಿಕೆಗಳತ್ತ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ಸಭೆಗೆ ಸಾಯಿನಾಥ ಮೇತ್ರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರವಾರ ಕೋಮಾರಪಂಥ ಸಮಾಜ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಆರ್.ಎಸ್. ನಾಯ್ಕ ಉಪಸ್ಥಿತರಿದ್ದರು. ಇದೇ ವೇಳೆ ಪ್ರಕಾಶ ಪಿ. ನಾಯ್ಕ (ಬಿಣಗಾ), ಕಾಶಿನಾಥ ನಾಯ್ಕ (ಅರ್ಗಾ) ಸೇರಿದಂತೆ ಸಂಘಟನೆಯ ಸದಸ್ಯರು, ಪದಾಧಿಕಾರಿಗಳು ಹಾಗೂ ಸಮಾಜಬಾಂಧವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಹಿರಿಯರ ಸನ್ಮಾನ, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ನಡೆಸಲಾಯಿತು.
ಸ್ವಾಗತಗೀತೆಯನ್ನು ಸೋನಿಯಾ, ಸ್ನೇಹಲ್, ಸೋನಲ್ ತಂಡ ಹಾಡಿದರು. ಸಂಘಟನೆಯ ಉಪಾಧ್ಯಕ್ಷ ರಾಮದಾಸ್ ಆರ್. ನಾಯ್ಕ ವರದಿ ವಾಚಿಸಿದರು. ಲೆಕ್ಕಪತ್ರಗಳನ್ನು ಕಾರ್ಯದರ್ಶಿ ಮಹಾಬಲೇಶ್ವರ ನಾಯ್ಕ ಮಂಡಿಸಿದರು. ಕಾರ್ಯಕ್ರಮವನ್ನು ಸಾಮಾಜಿಕ ಹೋರಾಟಗಾರ ಡಾ. ಗಜೇಂದ್ರ ನಾಯ್ಕ ನಿರ್ವಹಿಸಿದರು. ಸಂಜನಾ ಮೇತ್ರಿ ವಂದನಾರ್ಪಣೆ ಸಲ್ಲಿಸಿದರು.

