ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು: ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗಸಂದ್ರದಲ್ಲಿ ಶಿರಸಿ ಮೂಲದ ಮಹಿಳೆಯೊಬ್ಬರು ಕೊಲೆಗೀಡಾದ ಭೀಕರ ಘಟನೆ ವರದಿಯಾಗಿದೆ.
ಕೊಲೆಯಾದ ಮಹಿಳೆಯನ್ನು ಪ್ರಮೋದಾ (37) ಎಂದು ಗುರುತಿಸಲಾಗಿದ್ದು, ಅವರು ಹೊಂಗಸಂದ್ರದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಅನೈತಿಕ ಸಂಬಂಧದ ಸಂಶಯವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಶಂಕಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಪ್ರಮೋದಾ ಅವರು ಸುರೇಶ್ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಪ್ರಮೋದಾ ಅವರ ಮೇಲಿದ್ದ ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ, ಭಾನುವಾರ (ನವೆಂಬರ್ 16) ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಕೆಲವು ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಬರ್ಬರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಾಗುತ್ತಿದ್ದಂತೆಯೇ ಪ್ರಮೋದಾ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಹಲ್ಲೆಗಾರರು ಕತ್ತಲೆಯಲ್ಲೇ ಪರಾರಿಯಾಗಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆಯೇ ಬೊಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣವಾದ ನಿಖರ ಹಿನ್ನಲೆ ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.
ಪೊಲೀಸರು ಅಪರಾಧಿಗಳನ್ನು ಶೀಘ್ರದಲ್ಲೇ ಕಾನೂನು ಕ್ರಮಕ್ಕೆ ಒಳಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

