ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮನೆಮಾತಾಗುತ್ತಿರುವ ಆನ್‌ಲೈನ್ ಪಾರ್ಟ್–ಟೈಮ್ ಜಾಬ್ ಮೋಸದ ಮತ್ತೊಂದು ಪ್ರಕರಣ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಸುಲಭವಾಗಿ ದಿನಕ್ಕೆ ಸಾವಿರಾರು ರೂಪಾಯಿ ಸಂಪಾದಿಸಬಹುದು ಎಂಬ ಖಾತರಿಯಿಂದ ಮಹಿಳೆಯೊಬ್ಬರು ಒಟ್ಟು 10.98 ಲಕ್ಷ ರೂ. ವಂಚನೆಗೆ ಒಳಗಾದ ಘಟನೆ ದಾಖಲಾಗಿದೆ. ಈ ಕುರಿತು ಸೈಬರ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ವಂಚನೆಗೊಳಗಾದವರು ಸ್ಥಳೀಯವಾಗಿ ಖಾಸಗಿ ಉದ್ಯೋಗದಲ್ಲಿ ಕಾರ್ಯನಿರ್ವಹಿಸುವ ಸ್ವಪ್ನಾ ಸುರೇಶ ಮಹೇಕರ (32). ನವೆಂಬರ್ 4 ರಂದು “Mishika” ಎಂಬ ಹೆಸರುಳ್ಳ ಟೆಲಿಗ್ರಾಮ್ ಐಡಿಯಿಂದ ಇವರಿಗೆ ಸಂದೇಶವೊಂದು ಬಂದು, ಮನೆಯಲ್ಲೇ ಕುಳಿತು ಹಣ ಸಂಪಾದಿಸಬಹುದಾದ ‘ಟಾಸ್ಕ್‌ಬೇಸ್‌ಡ್‌ ಜಾಬ್’ ಒದಗಿಸಲಾಗುತ್ತಿದೆ ಎಂದು ಹೇಳಲಾಗಿದೆ.

ನಂತರ ವಾಟ್ಸಾಪ್ ಮೂಲಕ ಸಂಪರ್ಕಿಸಿದ ವ್ಯಕ್ತಿಗಳು ‘Rent’ ಎಂಬ ಪೋರ್ಟಲ್‌ಗಾಗಿ ಲಿಂಕ್ ಕಳುಹಿಸಿ, ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್–ರಿವ್ಯೂ ನೀಡಿದರೆ ಪ್ರತಿದಿನ 3,000 ರೂ. ವರೆಗೆ ಗಳಿಸಬಹುದು ಎಂದು ಭರವಸೆ ನೀಡಿದರೂ, ಮೂಲ ಉದ್ದೇಶ ಹಣ ತೆಗೆಯುವುದೇ ಆಗಿತ್ತು.

ಮೊದಲು 10,000 ರೂ. ಹೂಡಿಕೆ ಮಾಡಿಸಿದ ವಂಚಕರು, ಅದಕ್ಕೆ ಲಾಭದ ಹೆಸರಿನಲ್ಲಿ 15,268 ರೂ. ವಾಪಸ್ ನೀಡಿ ನಂಬಿಕೆ ಮೂಡಿಸಿದರು. ನಂತರ “ಇನ್ನಷ್ಟು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ” ಎಂದು ಒತ್ತಾಯಿಸಿದರು.

ಈ ನಡುವೆ ಅಂಕೋಲಾ ಅವರ್ಸಾದ ರೋಹನ್ ತಾಂಡೇಲ ಹಾಗೂ ಕಾರವಾರದ ತೇಜಸ್ ಎಂಬ ವ್ಯಕ್ತಿಗಳು ಕೂಡ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ಪ್ರೇರೇಪಿಸಿದ್ದಾಗಿ ದೂರುದಾರರು ತಿಳಿಸಿದ್ದಾರೆ. ಇವರಿಂದ ಹಣದ ಸಹಾಯ ಪಡೆದು, ಸ್ವಪ್ನಾ ಅವರು ಸೂಚಿಸಿದ ಅನೇಕ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹10,98,113 ಜಮಾ ಮಾಡಿದ್ದಾರೆ. ನಂತರ ಲಾಭಾಂಶವೋ, ಹೂಡಿಕೆಯ ಹಣವೋ — ಯಾವುದೂ ವಾಪಸ್ಸಾಗದೇ ತಾವು ಮೋಸಕ್ಕೆ ಸಿಲುಕಿದ್ದೇವೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ 8985056339 ನಂಬರನ್ನು ಬಳಸುತ್ತಿದ್ದ ಅಪರಿಚಿತರು ಸೇರಿದಂತೆ ಸ್ಥಳೀಯರಾದ ರೋಹನ್ ತಾಂಡೇಲ ಹಾಗೂ ತೇಜಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 319(2), 318(4), 49 ಹಾಗೂ 3(5) ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ 66(D) ಅಡಿ ಪ್ರಕರಣ ದಾಖಲಾಗಿದ್ದು, ಸೈಬರ್ ಪೊಲೀಸ್ ತನಿಖೆ ಕೈಗೊಂಡಿದೆ.

Please Share: