ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಕುಟಿನ್ಹೋ ರೋಡ್‌ನಲ್ಲಿ 75 ವರ್ಷದ ವಯೋವೃದ್ಧೆಯೊಬ್ಬರ ಮನೆಗೆ ಖದೀಮರು ಸಿನಿಮೀಯ ಶೈಲಿಯಲ್ಲಿ ಹಂಚು ತೆಗೆದು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಟಿನ್ಹೋ ರೋಡ್ ನಿವಾಸಿ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸುಲೋಚನಾ ನಾಗೇಶ ಶೆಟ್ಟಿ (75) ಅವರ ಮನೆ ಈ ಕೃತ್ಯದ ಟಾರ್ಗೆಟ್ ಆಗಿತ್ತು. ಸೋಮವಾರ ಸಂಜೆ 7 ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 6 ಗಂಟೆಯ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವೃದ್ಧೆ ಮನೆಯಲ್ಲಿ ಇಲ್ಲದ ಸಮಯವನ್ನು ಗಮನದಲ್ಲಿಟ್ಟುಕೊಂಡು ಖದೀಮರು ಮನೆ ಹಿಂಭಾಗದಿಂದ ಮೇಲೇರಿದ್ದಾರೆ. ಬಳಿಕ ಮಾಡಿನ ಹಂಚುಗಳನ್ನು ತೆಗೆದು ಒಳನುಗ್ಗಿ, ಒಳಗಿನ ಬಾಗಿಲನ್ನು ಮುರಿದು ಮನೆಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಹಣ ಹಾಗೂ ಚಿನ್ನಾಭರಣ ಕಳವು ಮಾಡಲು ಯತ್ನಿಸಿರುವುದಾಗಿ ಹೇಳಲಾಗಿದೆ.
ಬೆಳಿಗ್ಗೆ ಮನೆಗೆ ಬಂದ ಸುಲೋಚನಾ ಅವರಿಗೆ ಕಳ್ಳತನ ಯತ್ನ ನಡೆದಿರುವುದು ಗಮನಕ್ಕೆ ಬಂದಿದೆ. ಬಳಿಕ ಅಕ್ಕಪಕ್ಕದವರಲ್ಲಿ ವಿಚಾರಣೆ ನಡೆಸಿ ಸ್ವಲ್ಪ ವಿಳಂಬವಾದ ನಂತರ ಅವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
