ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ಮಗನ ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಮನೆ ಹೊರಟ ಗೃಹಿಣಿ ಹಾಗೂ ಆಕೆಯ 3 ವರ್ಷದ ಮಗು ನಾಪತ್ತೆಯಾಗಿರುವ ಘಟನೆ ಅಂಕೋಲಾ ಪಟ್ಟಣದಲ್ಲಿ ನಡೆದಿದೆ.

ಮಾವಿನಕೇರಿ ಹಟ್ಟಿಕೇರಿ ನಿವಾಸಿ ಮುಮ್ತಾಜ್ ಸದ್ದಾಂಹುಸೇನ ಮಕ್ತೇದಾರ (28) ಅವರು ಡಿಸೆಂಬರ್ 30ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರವಾರಕ್ಕೆ ಹೋಗಿ ಮಗನ ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಅಂಕೋಲಾ ಶಹರದಲ್ಲಿರುವ ಬಾಡಿಗೆ ಮನೆಯಿಂದ ಮಗ ಕು. ಅರ್ಮಾನ್ ಸದ್ದಾಂಹುಸೇನ ಮಕ್ತೇದಾರ (03) ಜೊತೆಗೆ ಹೊರಟಿದ್ದರು. ಆದರೆ ಅವರು ಮತ್ತೆ ಮನೆಗೆ ಮರಳದೇ ಕಾಣೆಯಾಗಿದ್ದಾರೆ.

ಗೃಹಿಣಿ ಹಾಗೂ ಮಗನನ್ನು ಸಂಬಂಧಿಕರು ಮತ್ತು ಪರಿಚಿತರ ಬಳಿ ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ, ಕಾಣೆಯಾದ ಮಹಿಳೆಯ ಪತಿ ಸದ್ದಾಂ ಹುಸೇನ್ ಅಲಿಸಾಬ್ ಮಕ್ತೇದಾರ (30) ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದ ಮುಮ್ತಾಜ್ ಅವರು ಸುಮಾರು 5 ಅಡಿ 2 ಇಂಚು ಎತ್ತರ, ಗೋದಿ ಮೈಬಣ್ಣ, ಉದ್ದನೆಯ ಮುಖ, ಸದೃಢ ಮೈಕಟ್ಟು ಹೊಂದಿದ್ದು, ಹಿಂದಿ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಅವರು ನೀಲಿ ಬಣ್ಣದ ಚೂಡಿಧಾರ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದು, ಕುತ್ತಿಗೆಯಲ್ಲಿ ಕರಿಮಣಿ ಸರ ಹಾಗೂ ಕಿವಿಯೋಲೆಗಳನ್ನು ಹಾಕಿಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆಕೆಯ ಮಗ ಅರ್ಮಾನ್ ಸುಮಾರು 2 ಅಡಿ ಎತ್ತರ ಹೊಂದಿದ್ದು, ಗೋದಿ ಮೈಬಣ್ಣ, ದುಂಡನೆಯ ಮುಖಚಹರೆ ಹೊಂದಿದ್ದಾನೆ. ಅವನು ನೀಲಿ ಟಿ-ಶರ್ಟ್ ಹಾಗೂ ಕೆಂಪು ಚಡ್ಡಿ ಧರಿಸಿದ್ದನು ಎಂದು ತಿಳಿಸಲಾಗಿದೆ.

ಈ ಮೇಲಿನ ಚಹರೆಯ ಮಹಿಳೆ ಮತ್ತು ಮಗನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: (08388) 220333

ಮೊಬೈಲ್: 9480805250 / 948080528

ಇ-ಮೇಲ್: ankolakwr@ksp.gov.in

 

 

Please Share: