ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಶಾಲಾ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ಖಾಸಗಿ ಓಮಿನಿ ವಾಹನ ಅಪಘಾತಕ್ಕೀಡಾದ ಘಟನೆ ಶನಿವಾರ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಬೊಲೆರೊ ವಾಹನಕ್ಕೆ ಓಮಿನಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ವಾಹನದಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಹಾಗೂ ಚಾಲಕ ಸೇರಿ ಒಟ್ಟು ಐವರಿಗೆ ಗಾಯಗಳಾಗಿವೆ.
ಅಪಘಾತದಲ್ಲಿ ಡಾ. ಎ.ವಿ. ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನಿಷ್ಕ (15), ಅದ್ವಿತ್ (12), ಅರ್ಜುನ್ (13), ಆಯಿರಾ (10) ಎಂಬ ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓಮಿನಿ ವಾಹನದ ಚಾಲಕ ಜಟ್ಟಿ ಮುಕ್ರಿ ಅವರಿಗೂ ಗಾಯವಾಗಿದ್ದು, ಎಲ್ಲ ಗಾಯಾಳುಗಳನ್ನು ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುವ ಸಂದರ್ಭದಲ್ಲಿ ಚಾಲಕನಿಗೆ ತಲೆ ಸುತ್ತು ಬಂದ ಕಾರಣ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಹೊಡೆತಕ್ಕೆ ಓಮಿನಿ ವಾಹನದ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಭಾರೀ ಹಾನಿಯಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಹಾಗೂ ವೇಗ ಹೆಚ್ಚಾಗಿರದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳ ನೆರವಿಗೆ ನಿಂತರು. ಸ್ಥಳಕ್ಕೆ ಆಗಮಿಸಿದ ಕುಮಟಾ ಪೊಲೀಸರು ಪರಿಸ್ಥಿತಿ ಪರಿಶೀಲನೆ ನಡೆಸಿ, ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಯಿತು. ಅಪಘಾತ ಸಂಭವಿಸಿದ ಸ್ಥಳದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ನಂತರ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ವಾಹನಗಳ ಸುರಕ್ಷತೆ ಕುರಿತು ಪಾಲಕರು ಆತಂಕ ವ್ಯಕ್ತಪಡಿಸಿದ್ದು, ಇಂತಹ ವಾಹನಗಳ ಚಾಲಕರ ಆರೋಗ್ಯ ಪರಿಶೀಲನೆ ಹಾಗೂ ನಿಯಮಿತ ತಪಾಸಣೆ ಅಗತ್ಯವೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
