ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಹವಾಮಾನ ಆಧಾರಿತ ಬೆಳೆ ವಿಮೆಯ ಎರಡನೇ ಕಂತಿನ ಮೊತ್ತವು ಯುಗಾದಿ ಹಬ್ಬದ ಸಂದರ್ಭದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ.

ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ವಿಮಾ ಮೊತ್ತವು ಈಗ ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ಬಿಡುಗಡೆ ಆಗುತ್ತಿದ್ದು, ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಜಮೆಯಾಗುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು ₹60 ಕೋಟಿ ಮೊತ್ತ ರೈತರ ಖಾತೆಗಳಿಗೆ ಜಮೆಯಾಗಿದ್ದು, ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.

ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ ಹಾಗೂ ಇಳುವರಿ ಕುಂಠಿತದಿಂದಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಇಂತಹ ಸಂದರ್ಭದಲ್ಲೇ ವಿಮಾ ಮೊತ್ತ ವಿತರಣೆಯ ಆರಂಭ ರೈತರಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡಿದೆ.

ರೈತರ ಸಂಕಷ್ಟಕ್ಕೆ ಸ್ಪಂದಿಸಿ ವಿಮಾ ಮೊತ್ತ ಬಿಡುಗಡೆ ಮಾಡಲು ಸಹಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ಕಾರ್ಯಪದ್ಧತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಳೆಮಾಪನ ಯಂತ್ರಗಳ ದುರಸ್ತಿ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿದರು. ಅನೇಕ ಕಡೆ ಯಂತ್ರಗಳು ದೋಷಪೂರಿತವಾಗಿರುವುದರಿಂದ ಮಳೆಯ ನಿಖರ ಅಂಕಿಅಂಶ ಲಭ್ಯವಾಗದೆ, ರೈತರಿಗೆ ಸಿಗಬೇಕಾದ ಪರಿಹಾರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರೈತಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ, ರಾಜ್ಯ ಸರ್ಕಾರ ಸಮರ್ಪಕ ನಿರ್ವಹಣೆ ಮಾಡದೇ ಅಡ್ಡಿಯಾಗುತ್ತಿದೆ ಎಂದು ಟೀಕಿಸಿದ ಅವರು, ತಕ್ಷಣವೇ ಮಳೆಮಾಪನ ಯಂತ್ರಗಳನ್ನು ದುರಸ್ತಿ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತನಿಗೂ ಈ ವಿಮಾ ಸೌಲಭ್ಯ ಹಂತ ಹಂತವಾಗಿ ತಲುಪಲಿದ್ದು, ಸಂಕಷ್ಟದ ಸಮಯದಲ್ಲಿ ಇದು ದೊಡ್ಡ ಆಸರೆಯಾಗಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.

Please Share: