ಕರಾವಳಿ ವಾಯ್ಸ್ ನ್ಯೂಸ್

ಕುಮಟಾ: ತಾಲೂಕಿನ ಹಿರೇಗುತ್ತಿ ಚೆಕ್‌ಪೋಸ್ಟ್‌ನಲ್ಲಿ ಸಿನೆಮಾದಲ್ಲಿ ಕಾಣುವಂತಹ ಘಟನೆಯೊಂದು ನಡೆದಿದೆ!

ಸರಕು ತುಂಬಿಕೊಂಡು ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಹರಿದು ಬಿದ್ದಿದೆ. ಕ್ಷಣಾರ್ಧದಲ್ಲಿ ಚೆಕ್ ಪೋಸ್ಟ್ ಸಂಪೂರ್ಣ ನುಜ್ಜುಗುಜ್ಜಾದರೂ ಅದೃಷ್ಟ ಸರಿ ಇದ್ದ ಕಾರಣಕ್ಕೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ತೀವ್ರತೆಯು ಅಷ್ಟರಮಟ್ಟಿಗೆ ಹೆಚ್ಚು ಇತ್ತು, ಕೆಲವು ಸೆಕೆಂಡ್‌ಗಳ ವಿಳಂಬವಾದರೂ ಭೀಕರ ಅನಾಹುತ ಅನಿವಾರ್ಯವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಣ್ಣಪುಟ್ಟ ಗಾಯಗಳಿಂದ ಪಾರಾದ ಪೊಲೀಸರ ಜೀವ ಉಳಿದಿರುವುದು ದೇವರ ಕೃಪೆ ಎಂದೇ ಹೇಳಬಹುದು.

ಸ್ಥಳೀಯರು ಈ ಘಟನೆಯ ಹೊಣೆ ಐಆರ್‌ಬಿ ಕಂಪನಿಯ ವಿಳಂಬ ಕಾಮಗಾರಿ ಮತ್ತು ಅಸಮರ್ಪಕ ರಸ್ತೆ ನಿರ್ವಹಣೆ ಮೇಲೆ ಹಾಕಿದ್ದಾರೆ. “ರಸ್ತೆಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಾವು ಹಲವು ಬಾರಿ ಜಿಲ್ಲಾಧಿಕಾರಿಗಳಿಂದ ಹಿಡಿದು ವಿವಿಧ ಹಂತದ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೂ ಯಾರೂ ಕಾಳಜಿ ವಹಿಸಲಿಲ್ಲ. ಈಗ ಪ್ರಾಣಾಪಾಯದ ಪರಿಸ್ಥಿತಿ!” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆಕ್‌ಪೋಸ್ಟ್ ಈಗ ಸಂಪೂರ್ಣ ಧ್ವಂಸಗೊಂಡಿದ್ದು, ಲಾರಿ ಚಾಲಕನ ಸ್ಥಿತಿ ಹಾಗೂ ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭವಾಗಿದೆ.

 

Please Share: