ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಹಾರವಾಡ ಗ್ರಾಮ ಪಂಚಾಯಿತಿ ಸಮೀಪ ಸಾರಿಗೆ ಬಸ್ ಬ್ರೇಕ್ ಫೇಲ್ ಆಗಿ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ಸಂಜೆ ನಡೆದಿದೆ.
ಸಂಜೆ ಸುಮಾರು 6 ಗಂಟೆಯ ವೇಳೆಗೆ ಬಸ್ ರಿವರ್ಸ್ ತೆಗೆದುಕೊಳ್ಳುವಾಗ ಏಕಾಏಕಿ ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ್ದು, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಪರಿಣಾಮವಾಗಿ ಸ್ಕೂಟಿಗೆ ಹಾಗೂ ಸಮೀಪದಲ್ಲಿದ್ದ ಗೋಡೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ಬಳಿಕ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯರ ಪ್ರಕಾರ, ಇದೇ ಪ್ರದೇಶದಲ್ಲಿ ಸಾರಿಗೆ ಬಸ್‌ಗಳ ತಾಂತ್ರಿಕ ದೋಷದಿಂದ ಸಂಭವಿಸಿರುವುದು ಇದು ನಾಲ್ಕನೇ ಘಟನೆ ಆಗಿದ್ದು, ಬಸ್‌ಗಳ ಸರಿಯಾದ ನಿರ್ವಹಣೆ ಮತ್ತು ತಪಾಸಣೆ ನಡೆಯದಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಡಿಪೋ ಮಟ್ಟದಲ್ಲಿ ಬಸ್‌ಗಳ ನಿಯಮಿತ ಪರಿಶೀಲನೆ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದ್ದು, ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಹಳೆಯ ಹಾಗೂ ತಾಂತ್ರಿಕ ದೋಷ ಹೊಂದಿರುವ ಬಸ್‌ಗಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಕರಾವಳಿ ವಾಯ್ಸ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/D4G99JuCZASH9M3LgJMyet
