ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಶೇಜವಾಡ ಗ್ರಾಮದ ಕೆಳಗಿನ ಮಖೇರಿಯಲ್ಲಿರುವ ಸುಪ್ರಸಿದ್ಧ ಶ್ರೀ ನವದುರ್ಗಾ ಗಿಂಡಿದೇವಿ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದು, ಗರ್ಭಗುಡಿಯ ಬೀಗ ಮುರಿದು ದೇವರ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ಕಳ್ಳತನವಾಗಿರುವುದು ಸ್ಥಳೀಯ ಭಕ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಫೆ.24ರ ಸಂಜೆ 6:45 ರಿಂದ ಫೆಬ್ರವರಿ 25ರ ಬೆಳಿಗ್ಗೆ 7:00 ಗಂಟೆಯ ನಡುವಿನ ರಾತ್ರಿಯ ಅವಧಿಯಲ್ಲಿ ಈ ದುಷ್ಕೃತ್ಯ ನಡೆದಿದೆ. ಯಾರೋ ಅಪರಿಚಿತ ಕಳ್ಳರು ದೇವಸ್ಥಾನದ ಮುಂಬಾಗಿಲಿನ ಬೀಗವನ್ನು ಗಟ್ಟಿಯಾದ ಆಯುಧದಿಂದ ಮುರಿದು ಒಳನುಗ್ಗಿದ್ದಾರೆ. ಬಳಿಕ ಗರ್ಭಗುಡಿಯ ಬಾಗಿಲಿನ ಲಾಕ್ ಅನ್ನೂ ಕಟ್ ಮಾಡಿ, ದೇವರ ಮೂರ್ತಿಯ ಮೇಲಿದ್ದ ಆಭರಣಗಳನ್ನು ಎಗರಿಸಿದ್ದಾರೆ.
ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೇವರ ಕುತ್ತಿಗೆಯಲ್ಲಿದ್ದ ಸುಮಾರು 5,000 ರೂ. ಮೌಲ್ಯದ 10 ಗ್ರಾಂ ತೂಕದ ಬೆಳ್ಳಿಯ ಹಾರ ಹಾಗೂ 1 ಗ್ರಾಂ ತೂಕದ ಬಂಗಾರದ ಲಾಕೆಟ್ ಇರುವ 10,000 ರೂ. ಮೌಲ್ಯದ ಎರಡು ಬೆಳ್ಳಿಯ ಕರಿಮಣಿ ಮಾಂಗಲ್ಯ ಸರಗಳನ್ನು ಕಳ್ಳರು ದೋಚಿದ್ದಾರೆ. ಒಟ್ಟಾರೆ 15,000 ರೂ. ಮೌಲ್ಯದ ಆಭರಣಗಳು ಕಳವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕೆಳಗಿನ ಮಖೇರಿ ನಿವಾಸಿ, ಖಾಸಗಿ ಉದ್ಯೋಗಿ ಮಹೇಂದ್ರ ಕುಶಾಲಿ ಬಾಂದೇಕರ (40) ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ನೀಡಿದ ದೂರಿನನ್ವಯ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಲಂ 331(3), 331(4) ಹಾಗೂ 305(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
