ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಸಿನಿಮಾ ಶೈಲಿಯಲ್ಲಿ ಬ್ಯಾಂಕೊಂದರ ಸ್ಟ್ರಾಂಗ್ ರೂಮ್ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿದ್ದಲ್ಲದೇ, ತಾಲೂಕಿನ ವಿವಿಧ ಭಾಗಗಳಲ್ಲಿ ಸರಣಿ ಕಳ್ಳತನ ನಡೆಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಐವರು ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಸುಂಕಸಾಳದ ಬ್ಯಾಂಕ್ ಓಫ್ ಬರೋಡ ಶಾಖೆ, ಹೆಗ್ಗಾರಿನ ಕಲ್ಪತರು ವಿವಿದ್ದೋದ್ದೇಶಗಳ ಸಹಕಾರಿ ಸಂಘ ಹಾಗೂ ಕನಕನಹಳ್ಳಿಯ ಅನ್ನಪೂರ್ಣ ಮಾರ್ಟ್ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಜನವರಿ 09ರಿಂದ 12ರ ನಡುವೆ ಸುಂಕಸಾಳದ ಬ್ಯಾಂಕ್ ಶಾಖೆಯ ಸ್ಟ್ರಾಂಗ್ ರೂಮ್ ಹಾಗೂ ಬಾತ್ರೂಮ್ ಗೋಡೆಯನ್ನು ಕೊರೆದು ಭಾರೀ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಈ ಘಟನೆ ತಾಲೂಕಿನಾದ್ಯಂತ ಸಂಚಲನ ಮೂಡಿಸಿತ್ತು.
ಇದೇ ಅವಧಿಯಲ್ಲಿ ಹೆಗ್ಗಾರಿನ ಕಲ್ಪತರು ಸಹಕಾರಿ ಸಂಘದಿಂದ ₹8,000 ನಗದು ಹಾಗೂ ಕನಕನಹಳ್ಳಿಯ ಅನ್ನಪೂರ್ಣ ಮಾರ್ಟ್ನಿಂದ ₹10,000 ನಗದು ಮತ್ತು ದಿನಸಿ ಸಾಮಾನುಗಳನ್ನು ಕದ್ದೊಯ್ಯಲಾಗಿದೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಾಂತ್ರಿಕ ಸೆಲ್ ನೆರವಿನಿಂದ ಕಾರ್ಯಾಚರಣೆ ನಡೆಸಿ ಮಾರ್ಚ್ 1ರಂದು ಐವರನ್ನು ಬಂಧಿಸಿದ್ದಾರೆ.
ಹಳವಳ್ಳಿಯ ವಿನಾಯಕ ಕಮಲಾಕರ ಸಿದ್ದಿ (19), ನಾಗೇಶ ಸುಬ್ರಾಯ ಸಿದ್ದಿ (24), ದುಗ್ಗದಮನೆಯ ರಾಜೇಶ ಲಕ್ಷ್ಮಣ ಸಿದ್ದಿ (27), ಮಳಲ್ಗಾವದ ಪ್ರಶಾಂತ ಅನಂತ ಸಿದ್ದಿ (19), ಕಲ್ಲೇಶ್ವರದ ನಿಲೇಶ ಗಣಪತಿ ಸಿದ್ದಿ (38) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಮೋಟಾರ್ ಬೈಕ್ಗಳು, ಒಂದು ಏಸರ್ ಟ್ಯಾಬ್ ಹಾಗೂ ಗೋಡೆ ಕೊರೆಯಲು ಬಳಸಿದ್ದ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಹಾಗೂ ಕಾರವಾರ ಡಿವೈಎಸ್ಪಿ ಗಿರೀಶ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ಪಿ.ಎಸ್.ಐ.ಗಳಾದ ವಿಶ್ವನಾಥ ನಿಂಗೋಳ್ಳಿ, ಗುರುನಾಥ ಹಾದಿಮನಿ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ. ಹಿರಿಯ ಅಧಿಕಾರಿಗಳು ಪೊಲೀಸ್ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.
