ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಸದಾಶಿವಗಡದಲ್ಲಿರುವ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆದ 57 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನೊಂದ ಸಾವಿರಾರು ಗ್ರಾಹಕರಿಗೆ ನ್ಯಾಯ ಒದಗಿಸಲು ಹೋರಾಟದ ಮುಂಚೂಣಿಯಲ್ಲಿ ನಿಂತವರು ಡಾ. ಗಜೇಂದ್ರ ನಾಯ್ಕ.
ಸುಮಾರು 6,000ಕ್ಕೂ ಹೆಚ್ಚು ಗ್ರಾಹಕರು ಮೋಸಕ್ಕೊಳಗಾದ ಈ ಬಹು ದೊಡ್ಡ ಆರ್ಥಿಕ ವಂಚನೆ ಪ್ರಕರಣದಲ್ಲಿ ಆರಂಭದಿಂದಲೇ ಕಾನೂನು ಹೋರಾಟ, ಸಂಘಟಿತ ಚಳವಳಿ ಹಾಗೂ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದುಕೊಡುವ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ನಕಲಿ ದಾಖಲೆಗಳ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ನಡೆದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಲಿಂಗರಾಜ ಕಲ್ಗುಟ್ಕರ್ ಬಂಧನವಾದ ಬಳಿಕವೂ, ಗ್ರಾಹಕರಿಗೆ ಠೇವಣಿ ಹಣ ಮರಳಿ ಸಿಗುವ ಪ್ರಶ್ನೆ ಅಸ್ಪಷ್ಟವಾಗಿಯೇ ಉಳಿದಿತ್ತು. ಈ ಸಂದರ್ಭದಲ್ಲಿ ವಂಚಿತ ಗ್ರಾಹಕರ ಸಂಘವನ್ನು ಸಂಘಟಿಸಿ, ಸರಕಾರದ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ, ಕಾನೂನು ಸಲಹೆ ಪಡೆದು, ಹಂತ ಹಂತವಾಗಿ ಹೋರಾಟ ರೂಪಿಸಿದ್ದೇ ಡಾ. ಗಜೇಂದ್ರ ನಾಯ್ಕ ಅವರ ತಂತ್ರಶುದ್ಧ ನಡೆ ಎಂದು ಗ್ರಾಹಕರು ಹೇಳುತ್ತಾರೆ.
ಅವರ ನಿರಂತರ ಪ್ರಯತ್ನದ ಫಲವಾಗಿ, ಕರ್ನಾಟಕ ಠೇವಣಿ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ (ಕೆಪಿಐಡಿ) 2004ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರನ್ನು ‘ಸಮರ್ಥ ಪ್ರಾಧಿಕಾರಿ’ಯಾಗಿ ನೇಮಕ ಮಾಡಲಾಗಿದೆ. ಇದರಿಂದ ಪ್ರಕರಣಕ್ಕೆ ಕಾನೂನುಬದ್ಧ ವೇಗ ಸಿಕ್ಕಿದ್ದು, ಗ್ರಾಹಕರಲ್ಲಿ ಹೊಸ ಆಶಾಕಿರಣ ಮೂಡಿದೆ.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಡಾ. ಗಜೇಂದ್ರ ನಾಯ್ಕ, “ಇದು ಅಂತಿಮ ಜಯವಲ್ಲ, ಆದರೆ ನ್ಯಾಯದ ದಾರಿಯಲ್ಲಿ ಮಹತ್ವದ ಹೆಜ್ಜೆ. ಪ್ರತಿಯೊಬ್ಬ ಗ್ರಾಹಕರಿಗೂ ಅವರ ಕಷ್ಟಾರ್ಜಿತ ಹಣ ಮರಳಿ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಆದೇಶದ ಬೆನ್ನಲ್ಲೇ, ಡಾ. ಗಜೇಂದ್ರ ನಾಯ್ಕ ಅವರ ನೇತೃತ್ವದಲ್ಲಿ ನೊಂದ ಗ್ರಾಹಕರು ನೂತನ ಪ್ರಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ತ್ವರಿತ ತನಿಖೆ ಹಾಗೂ ಆಸ್ತಿ ಜಪ್ತಿಯ ಮೂಲಕ ಹಣ ಮರುಪಾವತಿಸಲು ಒತ್ತಾಯಿಸಿದ್ದಾರೆ.
ಗ್ರಾಹಕರ ಹಕ್ಕಿಗಾಗಿ ಕಾನೂನು ಚೌಕಟ್ಟಿನೊಳಗೆ ಹೋರಾಡುವ ದೃಢಸಂಕಲ್ಪ, ಸಂಘಟನಾ ಸಾಮರ್ಥ್ಯ ಮತ್ತು ನಿರಂತರ ಹೋರಾಟದ ಮನೋಭಾವದಿಂದ ಡಾ. ಗಜೇಂದ್ರ ನಾಯ್ಕ ಈ ಪ್ರಕರಣದಲ್ಲಿ ನೊಂದ ಜನರಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ತಾತ್ಕಾಲಿಕ ಜಯ ಸಿಕ್ಕಿದ್ದರೂ, ಸಂಪೂರ್ಣ ನ್ಯಾಯ ದೊರಕುವವರೆಗೂ ಹೋರಾಟ ಮುಂದುವರಿಸುವ ನಿಶ್ಚಯವನ್ನು ಅವರು ಪುನರುಚ್ಚರಿಸಿದ್ದಾರೆ.
