ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ತೋಟದಲ್ಲಿ ಒಣಗಿದ ಅಡಿಕೆ ಮರವನ್ನು ಕಡಿಯುವಾಗ, ಕಡಿದ ಮರವು ಆಕಸ್ಮಿಕವಾಗಿ ತಲೆ ಮೇಲೆ ಬಿದ್ದು ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ತಾರಗೋಡ ಪೋಸ್ಟ್ ವ್ಯಾಪ್ತಿಯ ದಾಸನಗದ್ದೆ ಸಮೀಪದ ಕೇರೆಕೊಪ್ಪದಲ್ಲಿ ಗುರುವಾರ ಸಂಭವಿಸಿದೆ.
ಮೃತ ರೈತನನ್ನು ಕೇರೆಕೊಪ್ಪದ ನಿವಾಸಿ ರಮೇಶ ಸುಬ್ರಾಯ ನಿಲೇಕಣಿ (62) ಎಂದು ಗುರುತಿಸಲಾಗಿದೆ. ರಮೇಶ ಅವರು ದಾಸನಗದ್ದೆ ವ್ಯಾಪ್ತಿಯ ಸರ್ವೇ ನಂಬರ್ 14/2ರಲ್ಲಿರುವ ತಮ್ಮ 20 ಗುಂಟೆ ಜಮೀನಿನಲ್ಲಿ ಅಡಿಕೆ ತೋಟ ಮಾಡಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ತೋಟದಲ್ಲಿ ಒಣಗಿ ನಿಂತಿದ್ದ ಚಂಡಿ ಅಡಿಕೆ ಮರವನ್ನು ಕಡಿಯಲು ತೆರಳಿದಾಗ ಈ ದುರ್ಘಟನೆ ನಡೆದಿದೆ.
ಘಟನೆ ನಡೆದಿದ್ದು ಹೇಗೆ?
ರಮೇಶ ಅವರು ಒಣಗಿದ ಅಡಿಕೆ ಮರವನ್ನು ಕಡಿದಾಗ, ಅದು ಎದುರಿಗೆ ಇದ್ದ ಒಣಗಿದ ಮತ್ತಿ ಮರದ ಕೊಂಬೆಯ ಮೇಲೆ ಅಪ್ಪಳಿಸಿದೆ. ಇದರ ರಭಸಕ್ಕೆ ಕಡಿದ ಅಡಿಕೆ ಮರದ ಬುಡವು ಏಕಾಏಕಿ ಮೇಲಕ್ಕೆ ಚಿಮ್ಮಿ, ದಿಢೀರನೆ ಕೆಳಗೆ ಬಂದು ಮರ ಕಡಿಯುತ್ತಿದ್ದ ರಮೇಶ ಅವರ ತಲೆಯ ಮೇಲೆಯೇ ಭಾರಿ ವೇಗದಲ್ಲಿ ಬಿದ್ದಿದೆ. ಪರಿಣಾಮ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ರಮೇಶ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:
ಘಟನೆ ಕುರಿತು ಮೃತರ ಪತ್ನಿ ಅಂಬಿಕಾ ರಮೇಶ ನಿಲೇಕಣಿ (51) ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. “ಇದು ಆಕಸ್ಮಿಕವಾಗಿ ನಡೆದ ದುರ್ಘಟನೆಯಾಗಿದ್ದು, ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಅನುಮಾನಗಳಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಬೇಕು” ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಆಧಾರ ಸ್ತಂಭವಾಗಿದ್ದ ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
