ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ಪಟ್ಟಣದ ಯಲ್ಲಾಪುರ ರಸ್ತೆಯ ಪೋಸ್ಟ್ ಆಫೀಸ್ ಸಮೀಪ ರವಿವಾರ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್‌ನ ಡಬಲ್ ಟ್ರೈಲರ್‌ನ ಕೊಂಡಿ ಕಳಚಿ ಹಿಂಬದಿಯ ಟ್ರೈಲರ್ ಪಲ್ಟಿಯಾದ ಘಟನೆ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದ್ದರೂ ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದಂತಾಗಿದೆ.

ಕಬ್ಬು ತುಂಬಿಕೊಂಡು ಯಲ್ಲಾಪುರದತ್ತ ಸಾಗುತ್ತಿದ್ದ ಟ್ರಾಕ್ಟರ್, ಪಟ್ಟಣದ ಮಸೀದಿ ಬಳಿಯ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಟ್ರೈಲರ್‌ನ್ನು ಟ್ರಾಕ್ಟರ್‌ಗೆ ಜೋಡಿಸಿದ್ದ ಕೊಂಡಿ ಅಚಾನಕ್ ಕಳಚಿದೆ. ಪರಿಣಾಮವಾಗಿ ಹಿಂಬದಿಗೆ ಚಲಿಸಿದ ಟ್ರೈಲರ್ ನಿಯಂತ್ರಣ ತಪ್ಪಿ ಕೆಲವೇ ಹೊತ್ತಿನಲ್ಲಿ ರಸ್ತೆಯ ಮಧ್ಯೆ ಪಲ್ಟಿಯಾಗಿದೆ. ಈ ವೇಳೆ ಟ್ರೈಲರ್‌ನಲ್ಲಿದ್ದ ಕಬ್ಬು ರಸ್ತೆಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಘಟನೆಯ ಸಂದರ್ಭದಲ್ಲಿ ಟ್ರೈಲರ್‌ನಿಂದ ಬಿದ್ದ ಕಬ್ಬಿನ ಅಡಿಯಲ್ಲಿ ಎರಡು ಬೈಕ್‌ಗಳು ಸಿಲುಕಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್, ಯಾವುದೇ ಬೈಕ್ ಸವಾರರು ಅಥವಾ ಪಾದಚಾರಿಗಳಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಘಟನೆ ನಡೆದ ಸ್ಥಳವು ಪಟ್ಟಣದ ಜನಸಂದಣಿ ಪ್ರದೇಶವಾಗಿದ್ದು, ಒಂದುವೇಳೆ ಆ ಸಮಯದಲ್ಲಿ ಬೈಕ್ ಸವಾರರು, ಪಾದಚಾರಿಗಳು ಅಥವಾ ಇತರೆ ವಾಹನಗಳು ಸಮೀಪದಲ್ಲಿದ್ದರೆ ಭಾರೀ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಘಟನೆಯ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಂಚಾರವನ್ನು ನಿಯಂತ್ರಿಸಿ ರಸ್ತೆಯ ಮೇಲೆ ಬಿದ್ದಿದ್ದ ಕಬ್ಬನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರು. ಕೆಲ ಸಮಯ ಯಲ್ಲಾಪುರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾದರೂ ನಂತರ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿತು.

ಇತ್ತೀಚಿನ ದಿನಗಳಲ್ಲಿ ಪಟ್ಟಣದೊಳಗೆ ಕಬ್ಬು ತುಂಬಿದ ಭಾರೀ ಟ್ರಾಕ್ಟರ್ ಹಾಗೂ ಡಬಲ್ ಟ್ರೈಲರ್‌ಗಳ ಸಂಚಾರ ಹೆಚ್ಚಾಗುತ್ತಿದ್ದು, ಇಂತಹ ಅವಘಡಗಳು ಮರುಕಳಿಸುವ ಆತಂಕ ವ್ಯಕ್ತವಾಗಿದೆ. ಪಟ್ಟಣದ ಕಿರಿದಾದ ರಸ್ತೆಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ನಿರ್ದಿಷ್ಟ ಸಮಯ ಹಾಗೂ ಪರ್ಯಾಯ ಮಾರ್ಗ ನಿಗದಿಪಡಿಸುವಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.

 

Please Share: