ಲಖನೌ: ಮಾನವನಂತೆ “ಅಪರಾಧ–ಶಿಕ್ಷೆ” ಮಾದರಿ ಈಗ ಬೀದಿ ನಾಯಿಗಳಿಗೂ ಅನ್ವಯವಾಗಲಿದೆ. ಯಾವುದೇ ಪ್ರಚೋದನೆ ಇಲ್ಲದೆ ಎರಡು ಬಾರಿ ಮನುಷ್ಯರ ಮೇಲೆ ದಾಳಿ ಮಾಡಿದರೆ ಆ ನಾಯಿಗೆ ಜೀವಾವಧಿ ಬಂಧನ ನೀಡುವ ವಿಲಕ್ಷಣ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿದೆ.
ರಾಜ್ಯದ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಿತ್ ಅವರು ಹೊರಡಿಸಿದ ಸುತ್ತೋಲೆಯ ಪ್ರಕಾರ, ಮೊದಲ ಬಾರಿಗೆ ಕಚ್ಚಿದ ನಾಯಿಯನ್ನು ಹತ್ತು ದಿನಗಳ ಕಾಲ ಪ್ರಾಣಿ ಆರೈಕೆ ಕೇಂದ್ರದಲ್ಲಿ ಪೋಷಣೆ ಮಾಡಿ ಬಳಿಕ ಬಿಡುಗಡೆ ಮಾಡಲಾಗುತ್ತದೆ. ಆದರೆ ಮತ್ತೆ ದಾಳಿ ಮಾಡಿದರೆ ಆ ನಾಯಿಯನ್ನು ಜೀವನಪರ್ಯಂತ ಆರೈಕೆ ಕೇಂದ್ರದಲ್ಲೇ ಬಂಧಿಸಲಾಗುತ್ತದೆ.
ಈ ಹೊಸ ನಿಯಮದಂತೆ ನಾಯಿಗಳನ್ನು ದತ್ತು ತೆಗೆದುಕೊಳ್ಳುವವರು “ಮತ್ತೆಂದು ಬೀದಿಗೆ ಬಿಡುವುದಿಲ್ಲ” ಎಂಬ ಅಫಿಡವಿಟ್ ಕಡ್ಡಾಯವಾಗಿ ನೀಡಬೇಕಾಗುತ್ತದೆ. ನಿಯಮ ಉಲ್ಲಂಘಿಸಿದರೆ ದತ್ತು ಪಡೆದವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಾ ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸಿ ಅವರ ವರ್ತನೆಗೆ ನಿಗಾವಹಣೆ ಮಾಡಲಾಗುವುದು. ಅಲ್ಲದೆ “ನಾಯಿ ದಾಳಿ ಪ್ರಚೋದಿತವೇ?” ಎಂಬುದನ್ನು ತೀರ್ಮಾನಿಸಲು ಪಶುವೈದ್ಯರಿಂದ ವಿಶೇಷ ಸಮಿತಿ ರಚಿಸಲಾಗುತ್ತದೆ.
ಈ ಹಿಂದೆ ದೆಹಲಿ ಶ್ವಾನ ಹಾವಳಿ ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತ್ತು. ಆದರೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತೀರ್ಪಿನಲ್ಲಿ ತಿದ್ದುಪಡಿ ಮಾಡಲಾಗಿತ್ತು. ಈಗ ಉತ್ತರ ಪ್ರದೇಶದ ಈ “ಜೀವಾವಧಿ ಶಿಕ್ಷೆ” ಆದೇಶ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.


