ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ಕುಟುಂಬ ಕಲಹ ರಕ್ತಪಾತಕ್ಕೆ ತಿರುಗಿರುವ ಬೆಚ್ಚಿಬೀಳಿಸುವ ಘಟನೆ ತಾಲೂಕಿನ ತಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ತಾಯಿಯ ಮೇಲೆ ಸಂಶಯ ವ್ಯಕ್ತಪಡಿಸಿ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎರಡನೇ ತಂದೆಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದಲ್ಲಿ ಮಹಿಳೆಯ ಪುತ್ರ ಪರಾರಿಯಾಗಿದ್ದಾನೆ.

ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಲಾರಿ ಚಾಲಕ ಶಿವಾನಂದ ರಾಮಣ್ಣ ಗುಡಿಯಾಳ (48) ಎಂದು ಗುರುತಿಸಲಾಗಿದೆ. ಶಿವಾನಂದ ಈ ಹಿಂದೆ ಎರಡು ಮದುವೆ ಮಾಡಿಕೊಂಡಿದ್ದು, ಇಬ್ಬರು ಪತ್ನಿಯರು ಮೃತಪಟ್ಟ ನಂತರ ಸುಮಾರು ಒಂದೂವರೆ ವರ್ಷದ ಹಿಂದೆ ಹಾನಗಲ್ ತಾಲೂಕು ಮಹಾರಾಜಪೇಟೆ ಗ್ರಾಮದ ವಿಧವೆ ನಾಗಮ್ಮ ಪರಸಪ್ಪ ಕಲಕಟ್ಟಿಯನ್ನು ಮದುವೆಯಾಗಿದ್ದ.

ನಾಗಮ್ಮಗೆ ಮೊದಲ ಗಂಡನಿಂದ ಶಿವರಾಜ ಪರಸಪ್ಪ ಕಲಕಟ್ಟಿ (27) ಎಂಬ ಮಗನಿದ್ದು, ಆತ ಹಾನಗಲ್ ತಾಲೂಕಿನಲ್ಲೇ ವಾಸವಾಗಿದ್ದ. ನಾಗಮ್ಮ ಮಾತ್ರ ಶಿವಾನಂದನೊಂದಿಗೆ ತಟ್ಟಿಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಈ ನಡುವೆ ಶಿವಾನಂದ ಮತ್ತೊಂದು ಮದುವೆ ಮಾಡಿಕೊಂಡು ಮುಂಡಗೋಡ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ.

ಮೂರನೇ ಪತ್ನಿ ನಾಗಮ್ಮಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಶಿವಾನಂದ ಪ್ರತಿದಿನ ಜಗಳ, ಹೊಡೆಬಡೆ ನಡೆಸುತ್ತಿದ್ದನೆನ್ನಲಾಗಿದೆ. ಈ ಕಿರುಕುಳ ಸಹಿಸಲಾರದೆ ಬುಧವಾರ ನಾಗಮ್ಮ ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಳು. ಪೊಲೀಸರು ಠಾಣೆಗೆ ಹಾಜರಾಗುವಂತೆ ಶಿವಾನಂದನಿಗೆ ಹಲವು ಬಾರಿ ಕರೆ ಮಾಡಿದರೂ, ಊರಲ್ಲಿ ಇಲ್ಲ ಎಂದು ತಪ್ಪಿಸಿಕೊಂಡಿದ್ದಾನೆ. ಇದರಿಂದ ನಾಗಮ್ಮ ತಟ್ಟಿಹಳ್ಳಿ ಮನೆಗೆ ಮರಳಿದ್ದಳು.

ಗುರುವಾರ ಸಂಜೆ ಸುಮಾರು ಐದು ಗಂಟೆಗೆ ಹಾನಗಲ್ ತಾಲೂಕಿನ ಮಹಾರಾಜಪೇಟೆಯಿಂದ ಕಾರಿನಲ್ಲಿ ತಟ್ಟಿಹಳ್ಳಿಗೆ ಬಂದ ಶಿವರಾಜ, ತಾಯಿಗೆ ಯಾಕೆ ಕಿರುಕುಳ ನೀಡುತ್ತಿದ್ದೀಯೆ ಎಂದು ಎರಡನೇ ತಂದೆ ಶಿವಾನಂದನೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ಭೀಕರ ಹಲ್ಲೆಗೆ ತಿರುಗಿದ್ದು, ಶಿವರಾಜ ಮಚ್ಚಿನಿಂದ ಶಿವಾನಂದನ ಕುತ್ತಿಗೆ, ತಲೆಯ ಹಿಂಭಾಗ ಹಾಗೂ ಎದೆಗೆ ಅಡ್ಡಬಿಡದೆ ಹೊಡೆದು ಪರಾರಿಯಾಗಿದ್ದಾನೆ.

ಘಟನೆಯ ವೇಳೆ ಊರಿನ ಹೆಚ್ಚಿನವರು ಸಾಲಗಾಂವ ಜಾತ್ರೆಗೆ ತೆರಳಿದ್ದರಿಂದ ವಿಷಯ ಹೊರಬರಲು ತಡವಾಗಿದೆ. ನಂತರ ಲಾರಿ ಮಾಲೀಕನು ಚಾಲಕನ ಮನೆಗೆ ಬಂದಾಗ, ರಕ್ತದ ಮಡಿಲಿನಲ್ಲಿ ಬಿದ್ದಿದ್ದ ಶಿವಾನಂದನನ್ನು ಕಂಡು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ಖಾಸಗಿ ವಾಹನದ ಮೂಲಕ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ತೀವ್ರ ಗಾಯಗೊಂಡಿರುವ ಶಿವಾನಂದ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎನ್ನಲಾಗಿದೆ.

ಹಲ್ಲೆ ನಡೆಸಿದ ಆರೋಪಿ ಶಿವರಾಜನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪತ್ನಿ ನಾಗಮ್ಮ ಪೊಲೀಸ್ ಠಾಣೆಗೆ ಹಾಜರಾಗಿ ಘಟನೆ ಕುರಿತು ವಿವರ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ರಂಗನಾಥ ನೀಲಮ್ಮನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Please Share: