ಕರಾವಳಿ ವಾಯ್ಸ್ ನ್ಯೂಸ್

ಕಾರವಾರ/ಜೊಯಿಡಾ: ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ಮಹಿಳೆಯ ಮೇಲೆ ವಿಕೃತಿ ಮೆರೆದ ಕಾಮುಕನಿಗೆ ನ್ಯಾಯಾಲಯ ಗಂಭೀರ ಶಿಕ್ಷೆ ವಿಧಿಸಿದೆ.

ಪ್ರಕರಣದ ಗಂಭೀರತೆ ಅರಿತ ಶಿರಸಿ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ತಪ್ಪಿತಸ್ಥನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹15,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಜೊತೆಗೆ ಸಂತ್ರಸ್ತ ಮಹಿಳೆಗೆ ₹10,000 ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ ಆಗಿನ ಜೊಯಿಡಾ ಪೊಲೀಸ್ ಠಾಣೆಯ ಪಿಐ ರಮೇಶ್ ಹೂಗಾರ್ ಅವರ ಸಮರ್ಪಕ ತನಿಖೆ ಹಾಗೂ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಅವರ ಪರಿಣಾಮಕಾರಿ ವಾದದಿಂದಾಗಿ ಆರೋಪಿಗೆ ಕಂಬಿ ಎಣಿಸುವ ಶಿಕ್ಷೆ ದೊರಕಿದೆ.

ಘಟನೆ ಹಿನ್ನೆಲೆ
ಜೊಯಿಡಾ ತಾಲೂಕಿನ ಅಣಶಿ ಗ್ರಾಮದ ಕೈಲವಾಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಗ್ರಾಮದಲ್ಲಿ ಸಂತ್ರಸ್ತ ಮಹಿಳೆ ವಾಸವಾಗಿದ್ದರು. ಅವರು ಜೀವನೋಪಾಯಕ್ಕಾಗಿ ಹೈನುಗಾರಿಕೆ ನಡೆಸಿಕೊಂಡಿದ್ದು, ಪ್ರತಿದಿನ ಸಮೀಪದ ಅರಣ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಮೇಯಿಸಲು ಹೋಗುತ್ತಿದ್ದರು.

2018ರ ಡಿಸೆಂಬರ್ 1ರಂದು ಎಂದಿನಂತೆ ಮಹಿಳೆ ಹಸುಗಳನ್ನು ಮೇಯಿಸಿಕೊಂಡು ದಿನವಿಡೀ ಕಾಡಿನಲ್ಲಿ ಉಳಿದು, ಸಂಜೆ ಮನೆಗೆ ಮರಳುತ್ತಿದ್ದ ವೇಳೆ ಅದೇ ಗ್ರಾಮದ ಉಲ್ಲಾಸ ಸಡಕೋ ಗಾವಡಾ ಎಂಬಾತ ಎದುರಾದನು. ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ಆತ, ಆಕೆಯನ್ನು ಹಿಂದಿನಿಂದ ಗಟ್ಟಿಯಾಗಿ ತಬ್ಬಿಕೊಂಡು ದುಷ್ಕೃತ್ಯಕ್ಕೆ ಯತ್ನಿಸಿದನು.

ಕ್ರೂರ ಕೃತ್ಯ
ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಕೈ ಹಾಗೂ ಕುತ್ತಿಗೆಗೆ ಉಗುರಿನಿಂದ ಗಾಯಗೊಳಿಸಿ, ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಬೀಳಿಸಿದನು. ನಂತರ ಆಕೆಯ ಸೀರೆ ಹರಿದು ಮಾನಭಂಗ ಮಾಡಿದ್ದು, ಕಾಡಿನ ಮಧ್ಯೆ ಯಾರೂ ನೆರವಿಗೆ ಬಾರದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದಾನೆ.

ಘಟನೆಯ ನಂತರ ಸಂತ್ರಸ್ತೆಯನ್ನು “ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೀವ ತೆಗೆಯುವೆ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಸಾಕ್ಷಿನಾಶದ ಉದ್ದೇಶದಿಂದ ತಾನು ಧರಿಸಿದ್ದ ಬಟ್ಟೆಗಳನ್ನು ತೊಳೆದು ಒಣಗಿಸಿಕೊಂಡಿದ್ದುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆ
ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಪಿಐ ರಮೇಶ್ ಹೂಗಾರ್ ಅವರು ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಿದರು. ವಿವಿಧ ಸಾಕ್ಷಿಗಳನ್ನು ಸಂಗ್ರಹಿಸಿ, ವೈದ್ಯಕೀಯ ಮತ್ತು ಇತರೆ ಪುರಾವೆಗಳೊಂದಿಗೆ ಆರೋಪಪಟ್ಟಿ ಸಲ್ಲಿಸಿದರು.

ಶಿರಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಅವರು ಪ್ರಕರಣದ ಹಿನ್ನಲೆ, ಸಂತ್ರಸ್ತೆಗೆ ಆಗಿರುವ ಅನ್ಯಾಯ ಹಾಗೂ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿದರು. ಪೊಲೀಸ್ ಸಿಬ್ಬಂದಿ ಲಿಯಾಕತ್ ಅಲಿ ಹಾಗೂ ಖಲೀಲ್ ಮುಲ್ಲಾ ಅವರು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದರು.

ತೀರ್ಪು
ಆರೋಪಿಯ ವಾದ ಆಲಿಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪ ಸಂಪೂರ್ಣವಾಗಿ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಅಂತಿಮವಾಗಿ ಉಲ್ಲಾಸ ಗಾವಡಾ ಎಂಬ ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ, ₹15,000 ದಂಡ ಹಾಗೂ ಸಂತ್ರಸ್ತೆಗೆ ₹10,000 ಪರಿಹಾರ ನೀಡುವಂತೆ ಆದೇಶಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಈ ತೀರ್ಪು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಎಷ್ಟು ಕಠಿಣವಾಗಿದೆ ಎಂಬುದಕ್ಕೆ ಸ್ಪಷ್ಟ ಸಂದೇಶ ನೀಡಿದ್ದು, ಸಂತ್ರಸ್ತೆಗೆ ನ್ಯಾಯ ದೊರಕಿದಂತಾಗಿದೆ.

Please Share: