ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಸವಿತಾ ವೃತ್ತ ರಸ್ತೆಯಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ನಿಲ್ಲಿಸಲಾಗಿದ್ದ ಕಾರಿಗೆ ವೈರ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಮಾರುತಿ ಸುಜುಕಿ ರಿಡ್ಜ್ ಕಾರಿನೊಳಗೆ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದ್ದು, ಘಟನೆ ಗಮನಿಸಿದ ಸ್ಥಳೀಯರು ನೀರು ತಂದು ಸುರಿದು ಅಗ್ನಿಯನ್ನು ನಂದಿಸಲು ಪ್ರಯತ್ನಿಸಿದರು. ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು.
ಘಟನೆಯಾಗುವ ವೇಳೆಗೆ ಕಾರಿನಲ್ಲಿದ್ದವರು ಸುರಕ್ಷಿತರಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಾರಿನ ಮಾಲೀಕರಾಗಿರುವ ಮಹಮ್ಮದ್ ಗೌಸ್ ಮುಂಬೈನಲ್ಲಿದ್ದು, ಮನೆ ಬಾಡಿಗೆದಾರರು ಬಳಸುತ್ತಿದ್ದ ಈ ಕಾರನ್ನು ಸರ್ವಿಸ್ ಮಾಡಿ ತರುತ್ತಿದ್ದ ವೇಳೆ ಘಟನೆ ನಡೆದಿರುವುದು ತಿಳಿದುಬಂದಿದೆ.
ಬೆಂಕಿಯಿಂದ ಕಾರಿನ ಮುಂಭಾಗದ ಗಾಜು, ಆಸನಗಳು ಹಾಗೂ ಒಳಭಾಗದ ಹಲವಾರು ವಸ್ತುಗಳು ಹಾನಿಗೊಳಗಾಗಿವೆ. ವೈರ್ ಶಾರ್ಟ್ ಸರ್ಕ್ಯೂಟ್ವೇ ಅಗ್ನಿ ಅನಾಹುತಕ್ಕೆ ಕಾರಣ ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಭಲೇಶ್ವರ ಗೌಡ, ಸಿಬ್ಬಂದಿಗಳಾದ ರಾಜೇಶ್ ರಾಣೆ, ಟೋನಿ ಬಾರ್ಬೋಸಾ, ಕುಮಾರ ಎಸ್.ಕೆ, ಪ್ರವೀಣ ನಾಯ್ಕ ಹಾಗೂ ಶ್ರೀಕಾಂತ ದೊಡ್ಮನಿ ಪಾಲ್ಗೊಂಡಿದ್ದರು.

