ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ತಾಲೂಕಿನ ಗುಡ್ನಾಪುರದ ದೇವಾಲಯದಲ್ಲಿ ಕಳ್ಳರು ನುಗ್ಗಿ ಕಾಣಿಕೆ ಹುಂಡಿಗಳನ್ನು ಒಡೆದು ಒಳಗಿನ ಹಣ ದೋಚಿರುವ ಘಟನೆ ಡಿಸೆಂಬರ್ 3ರಂದು ಬೆಳಕಿಗೆ ಬಂದಿದೆ.
ಡಿ. 2ರ ರಾತ್ರಿ 7 ಗಂಟೆ ಸುಮಾರಿಗೆ ಪೂಜೆ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿ ಪೂಜಾರಿ ಮನೆಗೆ ತೆರಳಿದ್ದರು. ಆಗ ಕಾಣಿಕೆ ಹುಂಡಿಗಳು ಸರಿಯಾದ ಸ್ಥಿತಿಯಲ್ಲಿದ್ದವು. ಆದರೆ ಮರುದಿನ ಬೆಳಿಗ್ಗೆ 8 ಗಂಟೆಗೆ ಪೂಜಾರಿ ಗಣಪತಿ ಶೇಟ್ ದೇವಸ್ಥಾನಕ್ಕೆ ಬಂದಾಗ ಕಂಡ ದೃಶ್ಯ ಬೆಚ್ಚಿಬೀಳುವಂತಿತ್ತು. ಎರಡು ಕಾಣಿಕೆ ಹುಂಡಿಗಳ ಬೀಗಗಳು ಒಡೆದು, ಹಣ ಕಳುವಾದ ರುಜುಗಳು ಸ್ಪಷ್ಟವಾಗಿ ಕಾಣುತ್ತಿದ್ದವು.
ಪೂಜಾರಿ ತಕ್ಷಣ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗೆ ವಿಷಯ ತಿಳಿಸಿದ್ದು, ಕಾರ್ಯದರ್ಶಿ ಮತ್ತು ಸಮಿತಿಯವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಅಂದಾಜಾಗಿ ಎರಡೂ ಹುಂಡಿಗಳಲ್ಲಿ ಸುಮಾರು ₹10 ಸಾವಿರ ರೂ. ಹಣ ಇತ್ತು ಎಂದು ತಿಳಿದುಬಂದಿದೆ.
ಈ ಕುರಿತು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯ್ಕ ಅವರು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

