ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಗಣೇಶಗುಡಿಯಲ್ಲಿ ಜಲಕ್ರೀಡೆ ದರ ಏರಿಕೆ ವಿಚಾರವಾಗಿ ಭಾರೀ ಗಲಾಟೆ ನಡೆದಿದೆ. ದರ ಹೆಚ್ಚಳವನ್ನು ಪ್ರಶ್ನಿಸಿದ ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು, ಅದು ಹೊಡೆದಾಟದ ಹಂತಕ್ಕೆ ತಲುಪಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಗಣೇಶಗುಡಿಯ ಇಳವಾ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಜಲಕ್ರೀಡೆ ಸೇವೆಗಳನ್ನು ಒದಗಿಸಲು ‘ಸೂಪಾ ಅಸೋಸಿಯೇಶನ್’ ವತಿಯಿಂದ ಸ್ಥಾಪಿಸಲಾದ ‘ಒನ್ ಕೌಂಟರ್’ ವ್ಯವಸ್ಥೆಯಲ್ಲಿ ಇತ್ತೀಚೆಗೆ ದರಗಳನ್ನು ಏರಿಕೆ ಮಾಡಲಾಗಿತ್ತು. ಈ ಬಗ್ಗೆ ಮಾತುಕತೆ ನಡೆಸಲು ಬಂದಿದ್ದ ಗುಂಪಿನ ನಡುವೆ ವಾಗ್ವಾದ ಉಂಟಾಗಿ, ಕ್ಷಣಾರ್ಧದಲ್ಲೇ ಪರಿಸ್ಥಿತಿ ತೀವ್ರಗೊಂಡಿದೆ.
ಸುಮಾರು 15ರಿಂದ 20 ಜನರು ಪರಸ್ಪರ ದೂಡಾಟ, ಹೊಡೆದಾಟಕ್ಕೆ ಇಳಿದು ಸಾರ್ವಜನಿಕ ಸ್ಥಳದಲ್ಲೇ ರಂಪಾಟ ನಡೆಸಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪ್ರವಾಸಿಗರ ಮುಂದೆಯೇ ಈ ಘಟನೆ ನಡೆದಿರುವುದು ಗಮನಾರ್ಹವಾಗಿದೆ.
ಇದೇ ವೇಳೆ ಗಸ್ತು ತಿರುಗುತ್ತಿದ್ದ ರಾಮನಗರ ಪೊಲೀಸ್ ಠಾಣೆಯ ಎ.ಎಸ್.ಐ. ಎಫ್.ಎಸ್. ತಡಕೋಡ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಜಗಳವಾಡುತ್ತಿದ್ದವರನ್ನು ಬಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ವಿಚಾರಣೆ ನಡೆಸಿದ ವೇಳೆ ದರ ಏರಿಕೆಯೇ ಗಲಾಟೆಗೆ ಕಾರಣ ಎಂಬುದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದಾಂಡೇಲಿ ಮೂಲದ ಶ್ಯಾಮಲ, ಕರೀಂ ಕತೀಬ, ಸಂಜು ನಂದ್ಯಾಳಕರ, ಪವನ ಕೊನ್ನರ, ಉದಯ, ಬೈಲಾ ಜೋಸೇಫ್, ಸಚಿನ್ ಕಾಳೋಜಿ ಹಾಗೂ ಗಣೇಶಗುಡಿಯ ಇಳವಾ ನಿವಾಸಿ ಚಾಂದ ಕುಟ್ಟಿ ಸೇರಿದಂತೆ 8 ಜನರ ವಿರುದ್ಧ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಡಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸ್ಥಳೀಯರಲ್ಲಿ ಆತಂಕ ಮೂಡಿಸಿದ ಈ ಘಟನೆ ಪ್ರವಾಸಿ ತಾಣದಲ್ಲಿ ಭದ್ರತೆ ಹಾಗೂ ದರ ನಿಯಂತ್ರಣದ ಅಗತ್ಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
