ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಆಭರಣಗಳ ಕಳ್ಳತನ ಪ್ರಕರಣವನ್ನು ಕಾರವಾರ ಶಹರ ಪೊಲೀಸ್ ಠಾಣೆಯವರು ಕೇವಲ 24 ಗಂಟೆಯೊಳಗೆ ಭೇದಿಸಿ, ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ: ನ.20ರಂದು ಕಾರವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬೈಕ್ ಮೇಲಿದ್ದ ಬ್ಯಾಗ್‌ನ್ನು ಕಳ್ಳರು ಎತ್ತಿಕೊಂಡು ಪರಾರಿಯಾಗಿದ್ದರು. ಬ್ಯಾಗ್‌ನಲ್ಲಿದ್ದ ಸುಮಾರು 60 ಗ್ರಾಂ ಚಿನ್ನಾಭರಣಗಳು ಹಾಗೂ ಇತರ ವಸ್ತುಗಳನ್ನು ಸೇರಿಸಿ ಸುಮಾರು 4.85 ಲಕ್ಷ ರೂ. ಮೌಲ್ಯದ ಆಭರಣಗಳು ನಾಪತ್ತೆಯಾಗಿದ್ದವು.

ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು, ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಅವರ ನಿರ್ದೇಶನದಂತೆ, ಹೆಚ್ಚುವರಿ ಎಎಸ್‌ಪಿಗಳಾದ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ. ಹಾಗೂ ಕಾರವಾರ ಉಪವಿಭಾಗದ ಡಿಎಸ್ಪಿ ಎಸ್.ವಿ. ಗಿರೀಶ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದರು.

ತನಿಖೆ ಮತ್ತು ಬಂಧನ:
ಶಹರ ಪೊಲೀಸ್ ಠಾಣೆಯ ಪಿಐ ಜಯಶ್ರೀ ಎಸ್.ಎಂ. ಅವರ ನೇತೃತ್ವದಲ್ಲಿ, ಪಿಎಸ್‌ಐ ಬಾಬು ಆಗೇರ (ತನಿಖೆ–1) ಹಾಗೂ ಸುಧಾ ಅಘನಾಶಿನಿ (ಪಿಎಸ್‌ಐ-ತನಿಖೆ–3) ಅವರ ತಂಡ ಘಟನಾ ಸ್ಥಳದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ, ಸಂಶಯಾಸ್ಪದ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಕ್ಷಣ ಕ್ಷಣದ ಮಾಹಿತಿ ಜೋಡಣೆಯ ನಂತರ, ಕೇವಲ ಒಂದು ದಿನದೊಳಗೆ ಆರೋಪಿಯನ್ನು ಪತ್ತೆ ಹಿಡಿದು ಬಂಧಿಸಲಾಯಿತು. ಬಂಧಿತನಾಗಿ ರಫೀಕ್ ಖಾನ್ (62) ತಂದೆ ಜಬ್ಬರಖಾನ್, ವೃತ್ತಿ – ಗೌಂಡಿ ಕೆಲಸ, ಸವರಪ್ಪ–ಸದಾಶಿವಗಡ, ಚಿತ್ತಾಕುಲ ಎಂಬಾತನನ್ನು ಗುರುತಿಸಲಾಗಿದೆ.

ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಸೇರಿದಂತೆ ₹4.85 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಾನೂನು ಪ್ರಕಾರ ಜಪ್ತಿ ಮಾಡಲಾಗಿದೆ.

ಪೊಲೀಸರ ಪ್ರಶಂಸನೀಯ ಕಾರ್ಯ:
ಈ ಕಾರ್ಯಾಚರಣೆಯಲ್ಲಿ ಪಿಐ ಜಯಶ್ರೀ ಮಾನೆ, ಪಿಎಸ್‌ಐ ಬಾಬು ಆಗೇರ, ಪಿಎಸ್‌ಐ ಸುಧಾ ಅಘನಾಶಿನಿ ಹಾಗೂ ಸಿಬ್ಬಂದಿಗಳಾದ ಸುಧಾ ನಾಯ್ಕ, ರುದ್ರೇಶ ಮೈತ್ರಾಣಿ, ಶಿವರಾಮ ದೇಸಾಯಿ, ಮಹಮ್ಮದ್ ಇಸ್ಮಾಯಿಲ್ ಕೋಣನಕೇರಿ, ಸಚಿನ್ ನಾಯ್ಕ, ಅರ್ಜುನ ದೇಸಾಯಿ, ಪ್ರತಾಪಕುಮಾರ್ ಎಂ., ನಾಗೇಂದ್ರ ನಾಯ್ಕ, ಗಣೇಶ್ ನಾಯ್ಕ, ಮಾದೇವ ಸಂಗಾಪೂರ, ಪ್ರಕಾಶ ದಂಡಪ್ಪನವರ್ ಮುಂತಾದವರು ಪಾಲ್ಗೊಂಡಿದ್ದರು.

ಉತ್ತಮ ಸೇವೆ ಹಾಗೂ ಕ್ಷಿಪ್ರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್ ಅವರು ತಂಡವನ್ನು ಶ್ಲಾಘಿಸಿದ್ದಾರೆ.

Please Share: