ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಜಿಲ್ಲೆಯಲ್ಲಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು, ಅನಧಿಕೃತವಾಗಿ ಸಿಲಿಂಡರ್ ದಾಸ್ತಾನು, ಸಾಗಾಣಿಕೆ ಅಥವಾ ರಿಫಿಲಿಂಗ್ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ತೈಲ ಕಂಪನಿಗಳಾದ IOC, BPC, HPC ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಪಿಜಿ ಸಿಲಿಂಡರ್ಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗಿದೆ. ಸಭೆಯಲ್ಲಿ ತೈಲ ಕಂಪನಿಗಳ ಅಧಿಕಾರಿಗಳು ಜಿಲ್ಲೆಯಲ್ಲಿ ಗೃಹಬಳಕೆಗೆ ಅಗತ್ಯವಿರುವಷ್ಟು ಎಲ್ಪಿಜಿ ದಾಸ್ತಾನು ಲಭ್ಯವಿದೆ ಎಂದು ಖಚಿತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಹಕರು ಎಲ್ಪಿಜಿ ಸರಬರಾಜಿನ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆತಂಕದ ಹಿನ್ನೆಲೆಯಲ್ಲಿ ತುರ್ತು ಅಥವಾ ಅನಗತ್ಯವಾಗಿ ಸಿಲಿಂಡರ್ ಬುಕ್ಕಿಂಗ್ ಮಾಡುವುದರಿಂದ ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಸಮತೋಲನದಿಂದ ಬಳಕೆ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಸರ್ಕಾರಿ ಆಸ್ಪತ್ರೆಗಳು, ವಿದ್ಯಾರ್ಥಿ ನಿಲಯಗಳು, ಅಂಗನವಾಡಿ, ಶಾಲೆಗಳು, ಕಾಲೇಜುಗಳು ಹಾಗೂ ಕಾರಾಗೃಹಗಳಂತಹ ಸಾರ್ವಜನಿಕ ಸೇವಾ ಸಂಸ್ಥೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಎಲ್ಪಿಜಿ ಪೂರೈಕೆ ನಿರಂತರವಾಗಿರಲು ತೈಲ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಇದಲ್ಲದೆ, ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ಗಳ ದಾಸ್ತಾನು, ಸಾಗಾಣಿಕೆ ಅಥವಾ ರಿಫಿಲಿಂಗ್ ನಡೆಸಿದರೆ Essential Commodities Act 1955, Petroleum Products (Maintenance of Production, Storage and Supply) Order 1999 ಹಾಗೂ LPG Control Order 2000 ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಈ ಸಂಬಂಧ ಎಲ್ಲಾ ತಾಲೂಕಿನ ತಹಶೀಲ್ದಾರರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ಕಾಳಸಂತೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ.
ಎಲ್ಪಿಜಿ ಸಂಬಂಧಿತ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳ ಕಂಟ್ರೋಲ್ ರೂಮ್ 08382-229857 ಅಥವಾ ಪೊಲೀಸ್ ಕಂಟ್ರೋಲ್ ರೂಮ್ 9480805200 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
