ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಸಿದ್ದರದ ವ್ಯಾಪ್ತಿಯಲ್ಲಿ ಕೋಣ ಕಳ್ಳ ಸಾಗಾಟದ ಪ್ರಕರಣ ಬಯಲಾಗಿದ್ದು, ನಾಲ್ವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಶನಿವಾರ ರಾತ್ರಿ ನಡೆದ ಈ ಘಟನೆ ಸ್ಥಳೀಯರಲ್ಲಿ ಕೆಲಕಾಲ ಭೀತಿಯೊಂದಿಗೆ ಕುತೂಹಲಕ್ಕೂ ಕಾರಣವಾಯಿತು.
ದೂರಿನ ಪ್ರಕಾರ, ಕಿರವತ್ತಿ ಮೂಲದವರಾದ ಕೆಎ47/ಎ 2830 ನಂಬರದ ಟಾಟಾ ಇಂಟ್ರಾ ವಾಹನದ ಚಾಲಕ ಅಣ್ಣಪ್ಪ ಗೌಡಪ್ಪ ನಾಯ್ಕ (35) ಹಾಗೂ ಕ್ಲೀನರ್ ಶಿವಾನಂದ ಬಸವಣ್ಣೆಪ್ಪ ರೋಟಗೋಡ (26) ರವರು, ಖಾರ್ಗೆಜೂಗದ ಶೈಲೇಶ್ ಮಹಾಭಲೇಶ್ವರ ನಾಯ್ಕ ಹಾಗೂ ಪರಶುರಾಮ ಮನೋಹರ ಮಾಂಜೇಕರರೊಂದಿಗೆ ಸೇರಿಕೊಂಡು, ಯಾರದೋ ಕೋಣವನ್ನು ಆಹಾರ–ಮೇವೂ ನೀಡದೇ, ಇಕ್ಕಟ್ಟಾಗಿ ಕಟ್ಟಿಹಾಕಿ, ಯಾವುದೇ ಪರವಾನಿಗೆ ಇಲ್ಲದೇ ಖಾರ್ಗೆಜೋಗದಿಂದ ಯಲ್ಲಾಪುರ–ಕಿರವತ್ತಿಯ ಕಡೆಗೆ ಕಳ್ಳ ಸಾಗಾಟ ಮಾಡುತ್ತಿದ್ದರು.
ಐಟಿಐ ಕ್ರಾಸ್‌ನಲ್ಲಿ ಸಂಜೆ 8.30ಕ್ಕೆ ಸಿಕ್ಕಿಬಿದ್ದ ವಾಹನ
ಶನಿವಾರ ರಂದು ರಾತ್ರಿ 8.30ರ ಸುಮಾರಿಗೆ ಸಿದ್ದರ ಐಟಿಐ ಕ್ರಾಸ್ ಬಳಿ ಸಂಶಯಾಸ್ಪದವಾಗಿ ಚಲಿಸುತ್ತಿದ್ದ ವಾಹನವನ್ನು ಸ್ಥಳೀಯರು ಮೊದಲು ಗಮನಿಸಿದ್ದಾರೆ. ಕೋಣದ ಬಿಕ್ಕಟ್ಟು ಮತ್ತು ವಾಹನದ ಒಳಗಿನ ಅಸಹಜ ಚಲನೆಯಿಂದ ವಿಷಯ ಅನುಮಾನಾಸ್ಪದವಾಗಿ ಕಂಡ ಸ್ಥಳೀಯರು ಆರೋಪಿಗಳನ್ನು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಕೋಣ ಸಮೇತ ವಾಹನವನ್ನು ವಶಕ್ಕೆ ಪಡೆದು ಆರೋಪಿಗಳನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯ ನಾಟಕವಾಡಿದ ಆರೋಪಿ!
ಪ್ರಕರಣದಿಂದ ತಪ್ಪಿಸಿಕೊಳ್ಳಲು ಆರೋಪಿ ಶೈಲೇಶ್ ನಾಯ್ಕ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಫೋನ್ ಮೂಲಕ ಸ್ಥಳೀಯರಿಗೆ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಆದರೆ ಸಂಶಯಗೊಂಡ ಸ್ಥಳೀಯರು ಹತ್ತಿರದ ದೇವಳಮಕ್ಕಿ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ, ಶೈಲೇಶ್ ಅಲ್ಲಿ ದಾಖಲಾಗಿರದೇ, ಈಗಾಗಲೇ ಕಾಲ್ಕಿತ್ತಿರುವುದು ಸ್ಪಷ್ಟವಾಗಿದೆ. ಇದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು, ತನಿಖೆಯಲ್ಲಿ ಇದೂ ಒಂದು ಪ್ರಮುಖ ಅಂಶವಾಗಲಿದೆಯೇ ಕಾದುನೋಡಬೇಕಿದೆ.
ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭ
ಕೋಣಕ್ಕೆ ಆಹಾರ, ಮೇವು ನೀಡದೇ ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾರಿಗೆಯ ನಿಯಮ ಉಲ್ಲಂಘಿಸಿ ಕಳ್ಳ ಸಾಗಾಟ ಮಾಡಿರುವ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಾನುವಾರು ಸಮೇತ ವಾಹನ ಈಗ ಪೊಲೀಸ್ ವಶದಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಸ್ಥಳೀಯರ ಜಾಗರೂಕತೆಯಿಂದ ಮತ್ತೊಂದು ಅನೈತಿಕ ಜಾನುವಾರು ಸಾಗಾಟ ಪ್ರಯತ್ನವನ್ನು ಪೊಲೀಸರು ತಡೆಗಟ್ಟಿದ್ದಾರೆ.

