ಕರಾವಳಿ ವಾಯ್ಸ್ ನ್ಯೂಸ್
ಸಿದ್ದಾಪುರ: ಪಟ್ಟಣದ ಹೆಸ್ಕಾಂ ಕಚೇರಿಯ ಜೂನಿಯರ್ ಪವರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನೌಕರರೊಬ್ಬರು ಕಳೆದ 25 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದ್ದು, ಈ ಕುರಿತು ಅವರ ಸಹೋದರ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಮೂಲದ ಮಹಾಕೂಟೇಶ್ವರ ಯಲ್ಲಪ್ಪ ಗಾಜಿ (35) ಕಾಣೆಯಾದ ಹೆಸ್ಕಾಂ ನೌಕರ. ಇವರು ಸಿದ್ದಾಪುರದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಇಲ್ಲಿನ ಕೆ.ಇ.ಬಿ ಕ್ವಾಟ್ರಸ್‌ನಲ್ಲಿ ಒಬ್ಬರೇ ವಾಸವಿದ್ದರು. ಅವಿವಾಹಿತರಾಗಿದ್ದ ಮಹಾಕೂಟೇಶ್ವರ ಅವರಿಗೆ ವಿಪರೀತ ಮದ್ಯಪಾನದ ಚಟವಿತ್ತು ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮೆಸ್ಕಾಂ ನೌಕರರಾಗಿರುವ ಫಿರ್ಯಾದಿ ಹನಮಪ್ಪ ಗಾಜಿ ಅವರಿಗೆ, ಕಳೆದ ಫೆಬ್ರವರಿ 1 ರಂದು ಕರೆ ಮಾಡಿದ್ದ ಮಹಾಕೂಟೇಶ್ವರ, “ನನ್ನ ಮೊಬೈಲ್ ಕಳೆದುಹೋಗಿದೆ, ನನಗೆ ತುರ್ತಾಗಿ ಹಣ ಬೇಕು” ಎಂದು ಕೇಳಿದ್ದರು. ಅದಾದ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಸಹೋದರನ ಪೋನ್ ಬಾರದಿದ್ದಾಗ ಗಾಬರಿಗೊಂಡ ಹನಮಪ್ಪ ಅವರು, ಫೆ.24 ರಂದು ಸಿದ್ದಾಪುರಕ್ಕೆ ಬಂದು ಕಚೇರಿಯಲ್ಲಿ ವಿಚಾರಿಸಿದ್ದಾರೆ.
ಈ ವೇಳೆ ಮಹಾಕೂಟೇಶ್ವರ ಅವರು ಫೆಬ್ರವರಿ 1 ರಿಂದಲೇ ಕೆಲಸಕ್ಕೆ ಗೈರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕ್ವಾಟ್ರಸ್ ಹಾಗೂ ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಸುಳಿವು ಸಿಗದಿರುವುದರಿಂದ, ಫೆ.1 ರ ಬೆಳಿಗ್ಗೆ 8:30ರ ಮುಂಚೆಯೇ ಅವರು ಕ್ವಾಟ್ರಸ್ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾಣೆಯಾದ ನೌಕರನ ಪತ್ತೆಗೆ ಬಲೆ ಬೀಸಿದ್ದಾರೆ.
