ಕರಾವಳಿ ವಾಯ್ಸ್ ನ್ಯೂಸ್

ಯಲ್ಲಾಪುರ: ಬೆಳಗಾವಿಯಿಂದ ಕೇರಳಕ್ಕೆ ಎತೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಅರೆಬೈಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಟ್ಯಾಂಕರ್ ಪಲ್ಟಿಯಾದ ಕೂಡಲೇ ಅದರಲ್ಲಿ ಸಾಗಿಸಲಾಗುತ್ತಿದ್ದ ಎತೆನಾಲ್ ಹೊತ್ತಿ ಉರಿದು ಕೆಲಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಘಟನೆ ಸಂಭವಿಸಿದ ಸಮಯದಲ್ಲಿ ಟ್ಯಾಂಕರ್‌ನಲ್ಲಿದ್ದ ಚಾಲಕ ಹಾಗೂ ನಿರ್ವಾಹಕರು ತಕ್ಷಣ ವಾಹನದಿಂದ ಹೊರಬಂದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎತೆನಾಲ್ ಸುಲಭವಾಗಿ ಬೆಂಕಿ ಹಿಡಿಯುವ ದ್ರವವಾಗಿರುವುದರಿಂದ ಅಪಘಾತ ಇನ್ನಷ್ಟು ಭೀಕರವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಅಪಘಾತದ ಮಾಹಿತಿ ಪಡೆದ ತಕ್ಷಣ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ಎರಡೂ ದಿಕ್ಕುಗಳಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಗಿದ್ದು, ವಾಹನಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಸಾಗಿಸಲಾಯಿತು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಸುತ್ತಮುತ್ತಲ ಪ್ರದೇಶಕ್ಕೆ ಬೆಂಕಿ ಹರಡದಂತೆ ನಿಯಂತ್ರಣಕ್ಕೆ ತರಲಾಗಿದೆ.

ಈ ಅಪಘಾತಕ್ಕೆ ಚಾಲಕನ ನಿಯಂತ್ರಣ ತಪ್ಪಿರುವುದೇ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಮುಂದುವರಿದಿದೆ.

 

Please Share: