ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಬಾಲಕನೋರ್ವ ಅಪಹರಣಕ್ಕೊಳಗಾಗಿರುವ ಘಟನೆ ಅಂಕೋಲಾ ತಾಲೂಕಿನಲ್ಲಿ ವರದಿಯಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಅಪಹರಣಕ್ಕೊಳಗಾದ ಬಾಲಕನು ತಾಲೂಕಿನ ಸುಂಕಸಾಳ–ಮರಾಟಿಕೋಪ್ಪ ನಿವಾಸಿ ರಾಘವೇಂದ್ರ ಮಂಜುನಾಥ ಗಾಂವಕರ (17) ಆಗಿದ್ದಾನೆ. ಕಾರವಾರದ ಡಿಪ್ಲೊಮಾ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ರಾಘವೇಂದ್ರ ಶನಿವಾರ ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಎಂದಿನಂತೆ ಕಾಲೇಜಿಗೆ ತೆರಳಲು ಮನೆಯಿಂದ ಹೊರಟಿದ್ದನು. ಆದರೆ ಕಾಲೇಜಿಗೆ ತಲುಪದೇ ಕಾಣೆಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಅಪರಿಚಿತರು ಬಾಲಕನನ್ನು ಪುಸಲಾಯಿಸಿ ಅಪಹರಣ ಮಾಡಿ ಕರೆದುಕೊಂಡು ಹೋಗಿರುವ ಶಂಕೆಯನ್ನು ವ್ಯಕ್ತಪಡಿಸಿರುವ ತಂದೆ ಮಂಜುನಾಥ ಗಾಂವಕರ, ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಹರಣಗೊಂಡ ಮಗನನ್ನು ಶೀಘ್ರ ಪತ್ತೆಹಚ್ಚಿ ಕೊಡಬೇಕೆಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಬಾಲಕನ ಸ್ನೇಹಿತರು, ಸಹಪಾಠಿಗಳು ಹಾಗೂ ಪರಿಚಿತರ ವಲಯದಲ್ಲಿಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕಾಣೆಯಾದ ಬಾಲಕ ರಾಘವೇಂದ್ರ ಸುಮಾರು 5 ಅಡಿ ಎತ್ತರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾನೆ. ಮನೆಯಿಂದ ಹೊರಡುವ ವೇಳೆ ಹಸಿರು ಗೆರೆಯುಳ್ಳ ಬಿಳಿ ಶರ್ಟ್ ಧರಿಸಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಬಾಲಕನ ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಅಂಕೋಲಾ ಪೊಲೀಸ್ ಸಂಪರ್ಕ ಸಂಖ್ಯೆ 08388-230333, 94808-05250 ಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬಾಲಕನ ಪತ್ತೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Please Share: