ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಉಮ್ಮಚಗಿ KVG ಬ್ಯಾಂಕ್‌ ದರೋಡೆ ಯತ್ನ ಪ್ರಕರಣವನ್ನು ಯಲ್ಲಾಪುರ ಪೊಲೀಸರು ರೋಚಕ ಹಾಗೂ ಸಾಹಸೋತ್ಪನ್ನ ಕಾರ್ಯಾಚರಣೆಯ ಮೂಲಕ ಭೇದಿಸಿ, ರಾಜ್ಯದ ಮೋಸ್ಟ್‌ ವಾಂಟೆಡ್ ಪಟ್ಟಿಯಲ್ಲಿ ಇದ್ದ ಕುಖ್ಯಾತ ದರೋಡೆಕೋರ ಗೂಡಿನಬೈಲು ರಫೀಕ್ (ಮಹ್ಮದ್ ರಫೀಕ್) ಅನ್ನು ಸೋಮವಾರ ಬಂಧಿಸಿದ್ದಾರೆ.

ನವೆಂಬರ್ 12ರಂದು ನಡೆದಿದ್ದ ದರೋಡೆ ಯತ್ನದ ನಂತರ ರಫೀಕ್ ಹಾಗೂ ಅವನ ಗ್ಯಾಂಗ್ ಬೆಳಗಾವಿ ಶಹಾಪುರದ ಖಾಸಭಾಗದಲ್ಲಿ ಅಡಗಿ ಕುಳಿತು ಮತ್ತೊಂದು ದರೋಡೆ ಸಿದ್ಧತೆಯಲ್ಲಿ ತೊಡಗಿದ್ದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ಯಲ್ಲಾಪುರ ಪಿಐ ರಮೇಶ್ ಹನಾಪುರ ನೇತೃತ್ವದ ತಂಡ ಬೆಳಗಾವಿಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.

ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ – ಆತ್ಮಹತ್ಯೆಗೆ ದಾರಿ ಹಿಡಿದ ಆರೋಪಿ

ದಾಳಿ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ರಫೀಕ್, ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ವೇಳೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ನಂತರ ಪೊಲೀಸ್ರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದ ರಫೀಕ್, ತಾನು ಹಿಡಿದಿದ್ದ ‘ಡ್ರಾಗನ್ ಚಾಕು’ಯಿಂದ ತನ್ನದೇ ದೇಹಕ್ಕೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

50 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಂಟೆಡ್

ಬಂಧಿತ ರಫೀಕ್ ಮೇಲೆ ಕಳೆದ ಒಂದೂವರೆ ವರ್ಷಗಳಲ್ಲಿ ದರೋಡೆ, ಮನೆಕಳ್ಳತನ, ಬೀಗ ಒಡೆದು ಕಳವು, ಚೈನ್ ಸ್ನಾಚಿಂಗ್, ಬ್ಯಾಂಕ್‌ ಕಳ್ಳತನ ಯತ್ನ, ಬೈಕ್‌ ಕಳವು, 307 (ಕೊಲೆ ಯತ್ನ) ಸೇರಿ 50 ಕ್ಕೂ ಹೆಚ್ಚು ಪ್ರಕರಣಗಳು ದಾಖಲೆಯಾಗಿದೆ. ಬೆಂಗಳೂರು, ಉಡುಪಿ, ಮಂಗಳೂರು, ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರಫೀಕ್ ಮತ್ತು ಅವನ ಗ್ಯಾಂಗ್ ನಿಂದ ದರೋಡೆ ಪ್ರಕರಣಗಳು ನಡೆದಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಜ್ಯುವೆಲರಿ ಅಂಗಡಿಯೊಂದರ ದರೋಡೆಗೂ ಈ ಗ್ಯಾಂಗ್‍ನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಉಮ್ಮಚಗಿ ದರೋಡೆ ಯತ್ನ – ಸುಟ್ಟ ಬ್ಯಾಂಕ್, ನಾಶವಾದ CCTV

ನವೆಂಬರ್ 11ರ ರಾತ್ರಿ – 12ರ ಬೆಳಗಿನ ಜಾವ ಉಮ್ಮಚಗಿಯ KVG ಬ್ಯಾಂಕ್‌ಗೆ ರಫೀಕ್ ಗ್ಯಾಂಗ್ ನುಗ್ಗಿ ದರೋಡೆಗೆ ಯತ್ನಿಸಿತ್ತು. ಆದರೆ ಸೈರನ್ ಮೊಳಗುತ್ತಿದ್ದಂತೆ, ದರೋಡೆ ವಿಫಲವಾಗಲಿದೆ ಎಂಬ ಅರಿವಿನಿಂದ ಬ್ಯಾಂಕಿನೊಳಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ಬೆಂಕಿಯಲ್ಲಿ CCTV ಸೇರಿ ಬ್ಯಾಂಕ್‌ನ ಒಳಗಿನ ಬಹುತೇಕ ವಸ್ತುಗಳು ನಾಶವಾಗಿದ್ದವು. ಇದರಿಂದಾಗಿ ಆರೋಪಿಗಳ ಜಾಡು ಹಿಡಿಯುವುದು ಸವಾಲಾಗಿತ್ತು.

ಎರಡು ತಂಡ – ಚಾಣಾಕ್ಷ ಕಾರ್ಯಾಚರಣೆ

ಈ ಪ್ರಕರಣವನ್ನು ಪತ್ತೆಹಚ್ಚಲು ಯಲ್ಲಾಪುರ ಪಿಐ ರಮೇಶ್ ಹನಾಪುರ ಅವರು ಎರಡು ವಿಶೇಷ ತಂಡಗಳನ್ನು ರಚಿಸಿ ವಿವಿಧ ಕಡೆ ಕಾರ್ಯಾಚರಣೆ ನಡೆಸಿದರು. ಪ್ರಕರಣದ ತಾಂತ್ರಿಕ ಸುಳಿವುಗಳು ಮತ್ತು ಗುಪ್ತಮಾಹಿತಿಗಳ ಆಧಾರದ ಮೇಲೆ ಬೆಳಗಾವಿಯಲ್ಲಿ ಬಲೆ ಬೀಸಿ ರಫೀಕ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಯಲ್ಲಾಪುರ ಪೊಲೀಸ್ರ ಈ ಕಾರ್ಯಾಚರಣೆ ಜನರಿಂದ ಹಾಗೂ ಮೇಲಧಿಕಾರಿಗಳಿಂದ ಮೆಚ್ಚುಗೆ ಗಳಿಸಿದೆ.

Please Share: