ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಕೈಗಾ ಅಣುಸ್ಥಾವರದಲ್ಲಿ (Kaiga Nuclear Power Plant) ಭದ್ರತಾ ಲೋಪದ ಆತಂಕ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಅಣುಸ್ಥಾವರದಿಂದ ಸುಮಾರು 1.5 ಕೆಜಿ ತಾಮ್ರ (Copper) ಕಳ್ಳತನವಾಗಿರುವುದು ಶುಕ್ರವಾರ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಮೇಲೆ ಅನುಮಾನ ಗಟ್ಟಿಯಾಗುತ್ತಿದೆ.
ಕೈಗಾ ಅಣುಸ್ಥಾವರದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಅಣುಸ್ಥಾವರದಿಂದ ಹೊರಹೋಗುವ ವೇಳೆ ಮುಖ್ಯ ಗೇಟ್ನಲ್ಲಿ CISF ಪೊಲೀಸರ ಪರಿಶೀಲನೆ ವೇಳೆ ತಾಮ್ರ ಪತ್ತೆಯಾಗಿದೆ. ಈ ಬಸ್ನಲ್ಲಿ ಅಧಿಕಾರಿಗಳು ಸೇರಿ ವಿವಿಧ ವಿಭಾಗದ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ಕಳೆದ ಕೆಲವು ತಿಂಗಳಿನಿಂದ ಕೈಗಾ ಅಣುಸ್ಥಾವರದಿಂದ ದೊಡ್ಡ ಪ್ರಮಾಣದಲ್ಲಿ ತಾಮ್ರ ನಾಪತ್ತೆಯಾಗುತ್ತಿರುವ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆ, ಅನುಮಾನಾಸ್ಪದ ಸ್ಥಿತಿಯನ್ನು ಗಮನಿಸಿ ಮುಖ್ಯ ಗೇಟ್ನಲ್ಲಿ ಕರ್ತವ್ಯದಲ್ಲಿದ್ದ CISF ಸಿಬ್ಬಂದಿಯನ್ನು ಇತ್ತೀಚೆಗೆ ಬದಲಾಯಿಸಲಾಗಿತ್ತು.
ಶುಕ್ರವಾರ ಹೊಸದಾಗಿ ನೇಮಕಗೊಂಡ CISF ಸಿಬ್ಬಂದಿ ನಡೆಸಿದ ಕಟ್ಟುನಿಟ್ಟಿನ ಪರಿಶೀಲನೆ ವೇಳೆ ಈ ತಾಮ್ರ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪತ್ತೆಯಾದ ತಾಮ್ರವನ್ನು ಸದ್ಯ ಕೈಗಾ ಅಣುಸ್ಥಾವರದ ಒಳಗಿರುವ CISF ಪೊಲೀಸ್ ಕಚೇರಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾರು ತಾಮ್ರವನ್ನು ತೆಗೆದುಕೊಂಡರು, ಯಾವ ಉದ್ದೇಶದಿಂದ ಹೊರತೆಗೆದುಕೊಳ್ಳಲಾಗುತ್ತಿತ್ತು ಎಂಬುದು ತನಿಖೆಯ ನಂತರವೇ ಸ್ಪಷ್ಟವಾಗಬೇಕಿದೆ.
ಅಣುಸ್ಥಾವರದಂತಹ ಅತ್ಯಂತ ಭದ್ರತಾ ವಲಯದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದು ಭದ್ರತಾ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುವ ನಿರೀಕ್ಷೆಯಿದೆ.
