ಕರಾವಳಿ ವಾಯ್ಸ್ ನ್ಯೂಸ್ 

ಇರಾನ್–ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧದ ಹಿನ್ನೆಲೆ ಅನಿಲ ಸರಬರಾಜಿನಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಮನಗಂಡು ರಾಜ್ಯದಲ್ಲಿ ತಾತ್ಕಾಲಿಕ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಪ್ರತಿಯೊಂದು ಕುಟುಂಬಕ್ಕೂ ತಿಂಗಳಿಗೆ ಒಂದೇ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ಕಾಂಗ್ರೆಸ್ ಸದಸ್ಯ ಡಾ. ರಂಗನಾಥ್ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಅವರು, ಅಡುಗೆ ಅನಿಲ ಸಿಲಿಂಡರ್ ದೊರೆಯುವುದಿಲ್ಲ ಎಂಬ ಆತಂಕಕ್ಕೆ ಸಾರ್ವಜನಿಕರು ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.

ತೈಲ ಸರಬರಾಜು ಸಂಸ್ಥೆಗಳಾದ ಎಚ್.ಪಿ., ಇಂಡಿಯನ್ ಆಯಿಲ್, ಶೇಲ್ ಸೇರಿದಂತೆ ಇತರ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಅನಿಲ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಅದೇ ವೇಳೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲೆ ಕೆಲ ಮಟ್ಟಿನ ನಿಯಂತ್ರಣ ಹೇರಲಾಗಿದೆ. ಹೋಟೆಲ್, ಕಲ್ಯಾಣ ಮಂಟಪಗಳು ಸೇರಿದಂತೆ ಅನಗತ್ಯ ಬಳಕೆಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆಗೆ ತಾತ್ಕಾಲಿಕವಾಗಿ ಕಡಿವಾಣ ಹಾಕಲಾಗಿದೆ ಎಂದು ತಿಳಿಸಿದರು.

ಇಲ್ಲಿಯವರೆಗೆ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ದೊಡ್ಡ ಸಮಸ್ಯೆ ಉಂಟಾಗಿಲ್ಲ. ವಿದೇಶಗಳಿಂದ ಸರಬರಾಜು ವಿಳಂಬವಾದರೂ ದೇಶದಲ್ಲಿ ಸುಮಾರು 20 ರಿಂದ 30 ಶೇಕಡಾ ಅನಿಲವನ್ನು ಸ್ವಂತವಾಗಿ ಉತ್ಪಾದಿಸುವ ಸಾಮರ್ಥ್ಯವಿದೆ. ಆದ್ದರಿಂದ ಗ್ರಾಹಕರು ಆತಂಕಗೊಂಡು ಮುಂಗಡವಾಗಿ ಸಿಲಿಂಡರ್ ಕಾಯ್ದಿರಿಸುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದರು.

ಒಟ್ಟು ಅನಿಲದ ಸುಮಾರು 70 ಶೇಕಡಾ ವಿದೇಶಗಳಿಂದಲೇ ಬರಬೇಕಾಗುತ್ತದೆ. ಆದರೆ ಇರಾನ್ ಜಲ ಮಾರ್ಗದಲ್ಲಿ ತಡೆ ಉಂಟಾಗಿರುವ ಕಾರಣ ಅನಿಲ ಹಾಗೂ ಕಚ್ಚಾ ತೈಲ ಸರಬರಾಜು ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು. ಯುದ್ಧ ಪರಿಸ್ಥಿತಿ ಇರುವುದರಿಂದ ಗ್ಯಾಸ್ ವ್ಯರ್ಥ ಮಾಡದೆ ಎಲ್ಲರೂ ಸಹಕರಿಸಬೇಕು ಎಂದು ಸಚಿವ ಮುನಿಯಪ್ಪ ಸಾರ್ವಜನಿಕರಿಗೆ ಮನವಿ ಮಾಡಿದರು.

 

 

 

Please Share: