ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ಗೋವಾ–ಕರ್ನಾಟಕ ಗಡಿಯ ಅನ್ಮೋಡ್ ಬಳಿ ಗುರುವಾರ ನಡೆದ ಘಟನೆ ಸಿನಿಮಾ ಸನ್ನಿವೇಶಕ್ಕಿಂತ ಕಡಿಮೆ ಇರಲಿಲ್ಲ. ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಇನ್ನೋವಾ ಕಾರಿನ ಚಾಲಕ, ಪೊಲೀಸರ ಸೂಚನೆ ನಿರ್ಲಕ್ಷಿಸಿ ಅತಿವೇಗದಲ್ಲಿ ಓಡಿ, ರಾಜ್ಯಗಳ ಗಡಿ ದಾಟಿ, ಮರಳಿ ತಿರುಗಿ, ಕೊನೆಯಲ್ಲಿ ಕಾರು ಬಿಟ್ಟು ಕಾಡಿನೊಳಗೆ “ಅದೃಶ್ಯ” ಆದ ರೋಚಕ ದೃಶ್ಯಕ್ಕೆ ಸಾಕ್ಷಿಯಾಯಿತು.
ಅನ್ಮೋಡ್ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಯುತ್ತಿರುವ ವೇಳೆ GA 08 A 5193 ಸಂಖ್ಯೆಯ ಇನ್ನೋವಾ ಕಾರನ್ನು ನಿಲ್ಲಿಸಲು ಪೊಲೀಸರು ಸೂಚಿಸಿದರು. ಆದರೆ ಚಾಲಕ ಸೂಚನೆ ಲೆಕ್ಕಿಸದೆ ಗೋವಾ ದಿಕ್ಕಿನಲ್ಲಿ ವೇಗವರ್ಧನೆ ಮಾಡಿ ಪರಾರಿಯಾದ. ತಕ್ಷಣವೇ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಗೋವಾ ರಾಜ್ಯದ ದಾರಬಾಂದೋಡಾದಲ್ಲಿ ಪೊಲೀಸರು ವಾಹನ ತಡೆಹಿಡಿಯಲು ಮುಂದಾಗುತ್ತಿದ್ದಂತೆ, ಚಾಲಕ ಮತ್ತೊಂದು ಸಂಚಲನ ಮೂಡಿಸಿ ಕಾರನ್ನು ತಿರುಗಿಸಿ ಮತ್ತೆ ಕರ್ನಾಟಕದತ್ತ ಬಂದ. ಗಡಿ ಎರಡೂ ಬದಿಯಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದ ಪರಿಸ್ಥಿತಿ ಅನುಸರಿಸಿಕೊಂಡು, ಕೊನೆಗೆ ರಾಮನಗರ ಪೊಲೀಸರು ಅನ್ಮೋಡ್ ಬಳಿ ಬಲೆ ಬೀಸಿದರು.
ಚಲನಚಿತ್ರದ ಕ್ಲೈಮ್ಯಾಕ್ಸ್ನಂತೆ ಚೇಸಿಂಗ್ ಅಂತ್ಯವಾದಾಗ, ಪೊಲೀಸರು ಕಾರನ್ನು ವಶಪಡಿಸಿಕೊಂಡರು. ಆದರೆ ಚಾಲಕ, ಕ್ಷಣಾರ್ಧದಲ್ಲಿ ಕಾರನ್ನು ಬಿಟ್ಟು ಕಾಡಿನೊಳಗೆ ಓಡಿ ಕಣ್ಮರೆಯಾದ. ಹುಡುಕಾಟ ನಡೆಸಿದರೂ ಚಾಲಕ ಪತ್ತೆಯಾಗಲಿಲ್ಲ.
ಕಾರಿನೊಳಗೆ ನಡೆಸಿದ ಪರಿಶೀಲನೆ ವೇಳೆ 1 ಟನ್ಗೂ ಹೆಚ್ಚು, ಲಕ್ಷಾಂತರ ರೂಪಾಯಿಗಳ ಮೌಲ್ಯದ ಅಕ್ರಮ ಗೋಮಾಂಸ ಪತ್ತೆಯಾಗಿದೆ. ಮಫಿಯಾ ಜಾಲದ ಸುಳಿವು ಇದಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಡಿಗೆ ಪರಾರಿಯಾದ ಚಾಲಕ ಹಾಗೂ ವಾಹನ ಮಾಲೀಕರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಗಡಿಭಾಗದಲ್ಲಿ ನಡೆಯುತ್ತಿರುವ ಈ ರೀತಿ ಅಕ್ರಮ ಚಟುವಟಿಕೆಗಳು ಪೊಲೀಸರು ನಿಗಾವಹಿಸಲು ಮತ್ತಷ್ಟು ಒತ್ತಾಯಿಸುತ್ತಿವೆ.

