ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬನ ಸೈಕಲ್‌ನ್ನು ಮಧ್ಯಾಹ್ನ ಹಾಡುಹಗಲೇ ಕದ್ದೊಯ್ದ ವ್ಯಕ್ತಿಯನ್ನು ಕೇವಲ ಅರ್ಧ ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಕಾಲೇಜು ಆವರಣ ಗೋಡೆಯ ಪಕ್ಕದಲ್ಲಿ ನಿಲ್ಲಿಸಿದ್ದ ವಿದ್ಯಾರ್ಥಿಯ ಸೈಕಲ್ ನಾಪತ್ತೆಯಾಗಿತ್ತು. ತಕ್ಷಣ ಸುತ್ತಮುತ್ತ ಹುಡುಕಿದರೂ ಪತ್ತೆಯಾಗದ ಹಿನ್ನೆಲೆ ಆತಂಕಗೊಂಡ ವಿದ್ಯಾರ್ಥಿ ಉಪನ್ಯಾಸಕರಿಗೆ ಮಾಹಿತಿ ನೀಡಿದರು. ಉಪನ್ಯಾಸಕರು ಪೊಲೀಸರನ್ನು ಸಂಪರ್ಕಿಸಿ ಕಳ್ಳತನದ ಬಗ್ಗೆ ತಿಳಿಸಿದರು.

ಇದೇ ವೇಳೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಮಾರ್ಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನು ಸೈಕಲ್ ಹೊಡೆದುಕೊಂಡು ತೆರಳಿರುವುದನ್ನು ವಿದ್ಯಾರ್ಥಿಗಳೇ ಗಮನಿಸಿದ್ದರು. ಅವರ ವಿವರದ ಆಧಾರದ ಮೇಲೆ ಪೊಲೀಸರು ತಕ್ಷಣ ಹುಡುಕಾಟ ಆರಂಭಿಸಿದರು.

ಕೇಸರಿ ಬಣ್ಣದ ಟೀ ಶರ್ಟ್ ಧರಿಸಿದ ವ್ಯಕ್ತಿಯೇ ಸೈಕಲ್ ಕಳ್ಳ ಎಂದು ವಿದ್ಯಾರ್ಥಿಗಳ ಮಾಹಿತಿ ಹೇಳುವುದನ್ನು ಆಧರಿಸಿ, ಪೊಲೀಸರು ಪಟ್ಟಣದ ಮತ್ತೊಂದು ರಸ್ತೆ ಮೇಲೆ ಆರೋಪಿ ಕದ್ದ ಸೈಕಲ್ ಸವಾರಿ ಮಾಡುತ್ತಿರುವುದನ್ನು ಪತ್ತೆ ಹಚ್ಚಿದರು. ತಕ್ಷಣ ವಿಚಾರಣೆ ನಡೆಸಿ, ಸೈಕಲ್‌ ಸಮೇತ ಆರೋಪಿಯನ್ನು ವಶಕ್ಕೆ ಪಡೆದರು.

ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಬಸವರಾಜ್ ಸಂಗಪ್ಪ ಉತ್ಕನ್ನವರ ಎಂಬುವರನ್ನು ಆರೋಪಿಯಾಗಿ ಗುರುತಿಸಲಾಗಿದೆ. ಬಡ ವಿದ್ಯಾರ್ಥಿಯ ಸೈಕಲ್ ಪತ್ತೆಹಚ್ಚಿ ಅರ್ಧ ಗಂಟೆಯೊಳಗೆ ಕಳ್ಳನನ್ನು ಪತ್ತೆ ಹಚ್ಚಿದ ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯಚರಣೆಗೆ ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Please Share: