ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ಪಟ್ಟಣದಲ್ಲಿ ಶನಿವಾರ ಹಿಂದು ಮಹಿಳೆಯೊಬ್ಬಳನ್ನು ಕತ್ತು ಕುಯ್ದು ಕೊಲೆಗೈದು ಪರಾರಿಯಾಗಿದ್ದ ಮುಸ್ಲಿಂ ಯುವಕ ರಫೀಕ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ಆರೋಪಿ ರಫೀಕ್, ಪಟ್ಟಣದ ನಿಸರ್ಗ ಮನೆ ಹಿಂಬಾಗದ ಕಾಜಲವಾಡ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರವಿವಾರ ಮುಂಜಾನೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.
ಕೊಲೆ ಪ್ರಕರಣದ ಬಳಿಕ ಯಲ್ಲಾಪುರ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದರು. ನಿರಂತರ ಹುಡುಕಾಟದ ನಡುವೆಯೇ ರಫೀಕ್ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಶನಿವಾರ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುವಾಗ ಮಧ್ಯದಲ್ಲೇ ಅಡ್ಡಗಟ್ಟಿ ಮದುವೆಗೆ ಒತ್ತಾಯಿಸಿದ್ದಾನೆ. ರಂಜಿತಾ ಮತ್ತೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದನು.
ಘಟನೆಯ ಹಿನ್ನೆಲೆಯಲ್ಲಿ ಯಲ್ಲಾಪುರ ಪಟ್ಟಣದಾದ್ಯಂತ ಪೊಲೀಸ್ ಸರ್ಪಗಾವಲು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೊಲೆ ಮತ್ತು ಆತ್ಮಹತ್ಯೆ ಎರಡೂ ಪ್ರಕರಣಗಳ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.
