ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ಕೊಳಗಿ ಕ್ರಾಸ್ ಸಮೀಪದ ಕಾಡಿನಲ್ಲಿ ಕೆಲವು ದಿನಗಳ ಹಿಂದೆ ರುಂಡವಿಲ್ಲದ ಮಹಿಳೆಯ ಶವ ಪತ್ತೆಯಾಗಿದ್ದ ಘಟನೆ ಇಡೀ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಆ ಶವ ಅದೇ ಗ್ರಾಮದ ವೃದ್ಧೆಯೊಬ್ಬಳದ್ದಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರಂಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಮಹಿಳೆ ನಾಪತ್ತೆಯಾದ ಕುರಿತು ಮಿಸ್ಸಿಂಗ್ ಪ್ರಕರಣ ದಾಖಲಾಗಿರಲಿಲ್ಲ. ಆದರೆ ತನಿಖೆ ಮುಂದುವರಿದಂತೆ ಮಳಗಿ ಗ್ರಾಮದ ಶಿವಕ್ಕ ಎಂಬ ವೃದ್ಧೆ ಕಳೆದ ಒಂದು ವಾರದಿಂದ ಕಾಣೆಯಾಗಿರುವುದು ತಿಳಿದುಬಂದಿದೆ.
ಮಳಗಿ ಹೆದ್ದಾರಿ ಸಮೀಪ ಗೂಡಂಗಡಿ ಇಟ್ಟುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದ ಶಿವಕ್ಕಳ ನಾಪತ್ತೆ ಮತ್ತು ಕಾಡಿನಲ್ಲಿ ಪತ್ತೆಯಾದ ಶವದ ನಡುವೆ ಸಂಬಂಧವಿದೆಯೇ ಎಂಬ ಪ್ರಶ್ನೆ ಮೂಡಿದೆ. ಶವ ಪತ್ತೆಯಾದ ಮಾಹಿತಿ ತಿಳಿದು ಶಿವಕ್ಕಳ ಸಂಬಂಧಿಕರು ಸ್ಥಳಕ್ಕೆ ಭೇಟಿ ನೀಡಿ, ಶವದ ಬಳಿ ಸಿಕ್ಕ ಲಿಂಗ ಹಾಗೂ ಕೀಲಿಕೈ ಶಿವಕ್ಕಳದ್ದೇ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆದರೆ ಶವದ ಗುರುತು ಕುರಿತು ಪೊಲೀಸರು ಇನ್ನೂ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಅಂದಾಜು ಪ್ರಕಾರ ಮೃತ ಮಹಿಳೆಯ ವಯಸ್ಸು ಸುಮಾರು 35ರಿಂದ 40 ವರ್ಷಗಳೊಳಗೆ ಇರಬಹುದು ಎಂದು ತಿಳಿದುಬಂದಿದೆ. ಶಿವಕ್ಕಳು ವಯೋವೃದ್ಧೆಯಾಗಿರುವ ಹಿನ್ನೆಲೆ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ.
ಶಿವಕ್ಕಳಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದು, ಅವರಲ್ಲಿ ಒಬ್ಬರು ಕಾತೂರಿನಲ್ಲಿ ಹಾಗೂ ಮತ್ತೊಬ್ಬರು ಶಿರಸಿಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಕುಟುಂಬ ಸದಸ್ಯರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಅಗತ್ಯವಿದ್ದಲ್ಲಿ ಶವದ ಗುರುತು ಖಚಿತಪಡಿಸಲು ಡಿಎನ್‌ಎ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ರುಂಡವಿಲ್ಲದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತಿದ್ದು, ಗುರುತು ಮರೆಮಾಡುವ ಉದ್ದೇಶದಿಂದ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೊಲೆ ನಡೆದ ಸ್ಥಳವೇ ಕಾಡೇ ಅಥವಾ ಬೇರೆಡೆ ಹತ್ಯೆ ಮಾಡಿ ಇಲ್ಲಿ ತಂದು ಹಾಕಲಾಗಿದೆಯೇ ಎಂಬ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ನಿಜಾಂಶ ಸಂಪೂರ್ಣ ತನಿಖೆಯ ಬಳಿಕವೇ ಬಹಿರಂಗವಾಗಬೇಕಿದ್ದು, ಮಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮತ್ತು ಕುತೂಹಲದ ವಾತಾವರಣ ಮುಂದುವರಿದಿದೆ.
