ಕರಾವಳಿ ವಾಯ್ಸ್ ನ್ಯೂಸ್
ಶಿರಸಿ : ನವೆಂಬರ್ 15ರಂದು ಶಿರಸಿ ವಕೀಲರ ಸಂಘದ ಸಭೆಯಲ್ಲಿ ನಡೆದ ಮಾರಾಮಾರಿ ಪ್ರಕರಣ ತೀವ್ರತೆ ಪಡೆದಿದ್ದು, ಪರಸ್ಪರ ದೂರಿನ ಆಧಾರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ವಕೀಲರ ಸಂಘದ ಅಧ್ಯಕ್ಷ ಸಿ.ಎಫ್. ಈರೇಶ್ ಅವರು ನೀಡಿರುವ ದೂರಿನ ಪ್ರಕಾರ, ಸವಿತಾ ಐತಾಳ್, ಆರ್.ವಿ. ರಾಘವೇಂದ್ರ ಹೊಸೂರು ಇವರುಗಳು ತಮ್ಮ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಟ್ರಾಸಿಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ಇದರ ಮಧ್ಯೆ, ಜ್ಯೋತಿ ಮುಕ್ತೇಶ್ ಗೌಡ ಅವರು, ಸಿ.ಎಫ್. ಈರೇಶ್ ತಮ್ಮ ಹಾಗು ತಮ್ಮ ಪತಿ ಮುಕ್ತೇಶ್ ಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯೇಕ ದೂರು ನೀಡಿದ್ದಾರೆ.
ಅದೇ ರೀತಿಯಲ್ಲಿ, ವಕೀಲ ಚಂದ್ರಶೇಖರ ಪವಾರ್ ಅವರು ಮಂಜುನಾಥ ನಾಯ್ಕ, ಕೆ.ಜಿ. ಹೆಗಡೆ ಹಾಗೂ ಸಿ.ಎಫ್. ಈರೇಶ್ ವಿರುದ್ಧ ದೂರು ಸಲ್ಲಿಸಿದ್ದು, ಮಂಜುನಾಥ ನಾಯ್ಕ ಮತ್ತು ಕೆ.ಜಿ. ಹೆಗಡೆ ಇವರು ಜಾತಿ ನಿಂದನೆ ಮಾಡಿ, ತಂಡ ಬಂದು ತಮಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದು, ವಕೀಲರ ಸಂಘದ ಆಂತರಿಕ ಸಂಘರ್ಷವೇ ಘಟನೆಯ ಮೂಲ ಕಾರಣ ಎಂದು ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ವೇಗಗೊಳಿಸಿದ್ದಾರೆ.

