ಕರಾವಳಿ ವಾಯ್ಸ್ ನ್ಯೂಸ್
ನವದೆಹಲಿ: ಕರ್ನಾಟಕದ ಮಾಜಿ ಸಚಿವರು ಹಾಗೂ ಕಾರವಾರ–ಅಂಕೋಲಾ ಕ್ಷೇತ್ರದ ಮಾಜಿ ಶಾಸಕರಾದ ಆನಂದ್ ಅಸ್ನೋಟಿಕರ್ ಅವರು ಶುಕ್ರವಾರ ನವದೆಹಲಿಯಲ್ಲಿ ಮಹತ್ವದ ರಾಜಕೀಯ ಭೇಟಿ ನಡೆಸಿ ಮತ್ತೆ ಕರಾವಳಿ ಭಾಗದ ಜನರ ಧ್ವನಿಯಾಗಿ ಹೊರಹೊಮ್ಮಿದ್ದಾರೆ.
ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯಸಭಾ ಸದಸ್ಯರಾದ ಎಚ್. ಡಿ. ದೇವೆ ಗೌಡ ಮತ್ತು ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ಅಸ್ನೋಟಿಕರ್, ಕಾರವಾರ–ಅಂಕೋಲಾ ಭಾಗದ ಜನರು ಎದುರಿಸುತ್ತಿರುವ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದರು.
ವಿಶೇಷವಾಗಿ, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಸೀಬರ್ಡ್ ಯೋಜನೆ ಮತ್ತು ಕೈಗಾ ಅಣು ವಿದ್ಯುತ್ ಯೋಜನೆಗಳಿಂದ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯಗಳನ್ನು ಸ್ಪಷ್ಟವಾಗಿ ಮಂಡಿಸಿ, ಉದ್ಯೋಗದಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು. ಕರಾವಳಿ ಭಾಗದ ಅಭಿವೃದ್ಧಿಯ ಹೆಸರಿನಲ್ಲಿ ಜನರ ಹಕ್ಕು ಹರಣವಾಗಬಾರದು ಎಂಬುದು ಅವರ ದೃಢ ನಿಲುವಾಗಿ ಹೊರಹೊಮ್ಮಿತು.
ಇದಲ್ಲದೆ, ಕೇಣಿ ಪ್ರದೇಶದ ಮೀನುಗಾರರ ಸಮಸ್ಯೆಗಳನ್ನು ಎತ್ತಿಹಿಡಿದ ಅವರು, ಮುಂಬರುವ ಕೇಣಿ ಬಂದರ್ ಯೋಜನೆದಿಂದ ಜೀವನೋಪಾಯಕ್ಕೆ ಎದುರಾಗುತ್ತಿರುವ ಸಂಕಷ್ಟಗಳ ಕುರಿತು ನಾಯಕರು ಗಮನ ಹರಿಸುವಂತೆ ಮನವಿ ಮಾಡಿದರು. ಮೀನುಗಾರರ ಬದುಕು ಮತ್ತು ಉದ್ಯೋಗ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದರು.
ಈ ಎಲ್ಲ ವಿಷಯಗಳಿಗೆ ಸ್ಪಂದಿಸಿದ ಎಚ್.ಡಿ. ಕುಮಾರಸ್ವಾಮಿ, ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅಗತ್ಯವಿದ್ದಲ್ಲಿ ಸ್ವತಃ ಕಾರವಾರಕ್ಕೆ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸುವುದಾಗಿ ತಿಳಿಸಿದ್ದಾರೆ.
ಕರಾವಳಿ ಜನರ ಪರ ನಿರಂತರ ಹೋರಾಟಗಾರ ಆನಂದ್ ಅಸ್ನೋಟಿಕರ್ ಅವರು ಮತ್ತೆ ಒಮ್ಮೆ ಕರಾವಳಿ ಭಾಗದ ಜನರ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದು, ತಮ್ಮ ನಾಯಕತ್ವ ಮತ್ತು ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ. ಜನಪರ ಧೋರಣೆ, ಸ್ಪಷ್ಟ ಮಾತು ಮತ್ತು ನಿರಂತರ ಹೋರಾಟದ ಮೂಲಕ ಅವರು ಪ್ರದೇಶದ ವಿಶ್ವಾಸಾರ್ಹ ನಾಯಕನಾಗಿ ಮರುಸ್ಥಾಪನೆಗೊಂಡಿದ್ದಾರೆ.
