ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ತಾಲ್ಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಳ್ಳಿ ಗ್ರಾಮದಲ್ಲಿ ಶುಕ್ರವಾರ ಅಪರೂಪದ ಘಟನೆಯೊಂದು ನಡೆದಿದೆ. ಕಾಡಿನಿಂದ ಆಹಾರ ಅರಸುತ್ತಾ ನಾಡಿನತ್ತ ಬಂದಿದ್ದ ಎರಡು ಜಿಂಕೆಗಳ ಮೇಲೆ ಬೀದಿ ನಾಯಿಗಳು ಬೆನ್ನಟ್ಟಿದ ಪರಿಣಾಮ, ಜೀವ ರಕ್ಷಣೆಗೆ ಜಿಂಕೆಗಳು ಗ್ರಾಮದೊಳಗೆ ನುಗ್ಗಿ ಪ್ರತ್ಯೇಕವಾಗಿ ಎರಡು ಮನೆಗಳೊಳಗೆ ಆಶ್ರಯ ಪಡೆದಿವೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಅಜ್ಜಳ್ಳಿ ಗ್ರಾಮದ ಸಮೀಪದಲ್ಲಿ ಬೆಳಗಿನ ವೇಳೆಯಲ್ಲಿ ಕಾಣಿಸಿಕೊಂಡ ಜಿಂಕೆಗಳನ್ನು ಕಂಡ ನಾಯಿಗಳು ಏಕಾಏಕಿ ಬೆನ್ನಟ್ಟಲು ಆರಂಭಿಸಿದವು. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕುತಪ್ಪಿದ ಜಿಂಕೆಗಳು ಭಯಭೀತ ಸ್ಥಿತಿಯಲ್ಲಿ ಗ್ರಾಮದೊಳಗೆ ಓಡಿ ಬಂದು, ಒಂದೊಂದು ಜಿಂಕೆ ಒಂದೊಂದು ಮನೆಯೊಳಗೆ ನುಗ್ಗಿದೆ. ಮನೆಗಳೊಳಗೆ ಜಿಂಕೆಗಳನ್ನು ಕಂಡು ನಿವಾಸಿಗಳು ಕ್ಷಣಕಾಲ ಆತಂಕಗೊಂಡರೂ, ತಕ್ಷಣ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಾನವೀಯತೆ ಪ್ರದರ್ಶಿಸಿದ್ದಾರೆ.
ಗ್ರಾಮಸ್ಥರು ಸೇರಿಕೊಂಡು ನಾಯಿಗಳನ್ನು ದೂರ ಓಡಿಸಿ ಜಿಂಕೆಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಣೆ ನೀಡಿದರು. ಬಳಿಕ ವಿಷಯವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮಸ್ಥರ ಸಹಕಾರದೊಂದಿಗೆ ಜಿಂಕೆಗಳನ್ನು ಸುರಕ್ಷಿತವಾಗಿ ಹಿಡಿದು ಪರಿಶೀಲನೆ ನಡೆಸಿದರು. ಯಾವುದೇ ಗಂಭೀರ ಗಾಯಗಳಿಲ್ಲವೆಂದು ಖಚಿತಪಡಿಸಿಕೊಂಡ ಬಳಿಕ, ಎರಡೂ ಜಿಂಕೆಗಳನ್ನು ಸನವಳ್ಳಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಈ ಘಟನೆಯಲ್ಲಿ ಗ್ರಾಮಸ್ಥರ ಸಮಯೋಚಿತ ಕ್ರಮ ಮತ್ತು ಅರಣ್ಯ ಇಲಾಖೆಯ ತ್ವರಿತ ಸ್ಪಂದನೆ ಮೆಚ್ಚುಗೆಗೆ ಪಾತ್ರವಾಗಿದೆ. ಅರಣ್ಯಕ್ಕೆ ಸಮೀಪದ ಗ್ರಾಮಗಳಲ್ಲಿ ವನ್ಯಜೀವಿಗಳು ಆಹಾರ ಅರಸುತ್ತಾ ನಾಡಿನತ್ತ ಬರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ಎಚ್ಚರಿಕೆಯಿಂದ ವರ್ತಿಸಿ, ವನ್ಯಜೀವಿಗಳಿಗೆ ಹಾನಿಯಾಗದಂತೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕೆಂದು ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
