ಕರಾವಳಿ ವಾಯ್ಸ್ ನ್ಯೂಸ್ 

ರಾಮನಗರ/ಜೊಯಿಡಾ: ಗೋವಾ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ರಾಮನಗರ ಸಮೀಪದ ಅಸ್ತೋಲಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗೋವಾದಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಇನೋವಾ ಕಾರು ಹಾಗೂ ಹುಬ್ಬಳ್ಳಿಯಿಂದ ಗೋವಾಕ್ಕೆ ಸಾಗುತ್ತಿದ್ದ ರೆನಾಲ್ಟ್ ಕ್ವಿಡ್ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ರೆನಾಲ್ಟ್ ಕ್ವಿಡ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ರೆನಾಲ್ಟ್ ಕ್ವಿಡ್ ಕಾರಿನಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ರುದ್ರಯ್ಯ ಶಿವನವರ (77) ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ಬಳಿಕ ವಾಹನದೊಳಗೆ ಸಿಲುಕಿಕೊಂಡಿದ್ದರು. ಕಾರಿನ ಹಿಂಬದಿ ಆಸನದಲ್ಲಿದ್ದ ರೇಣುಕಾ ಹಿರೇಮಠ (60) ಅವರನ್ನು ಗಂಭೀರ ಸ್ಥಿತಿಯಲ್ಲಿ ರಾಮನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಕಾರು ಚಾಲಕ ಶಿವರಾಜ ಶಿವನವರ (28) ಹಾಗೂ ಬಸವ ಶಿವನವರ (70) ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಮೊದಲು ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮೃತರು ಹಾಗೂ ಗಾಯಾಳುಗಳು ಮೂಲತಃ ಹುಬ್ಬಳ್ಳಿ ತಾಲೂಕಿನ ಲಕ್ಷ್ಮೇಶ್ವರ ನಿವಾಸಿಗಳಾಗಿದ್ದು, ಪ್ರಸ್ತುತ ಗೋವಾದ ಫೊಂಡಾದಲ್ಲಿ ವಾಸವಿದ್ದರು ಎನ್ನಲಾಗಿದೆ. ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹುಬ್ಬಳ್ಳಿಯಿಂದ ಗೋವಾಕ್ಕೆ ಮೂರು ದಿನಗಳ ಪ್ರವಾಸ ಮುಗಿಸಿ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತ ಲೋಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರೂ, ರಾಮನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ರೆನಾಲ್ಟ್ ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅಲ್ಲದೆ ಕೆಲಕಾಲ ಅಸ್ತವ್ಯಸ್ತಗೊಂಡಿದ್ದ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಿದರು.

ಘಟನೆ ಸಂಬಂಧ ಲೋಂಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

 

Please Share: